ಧಾರವಾಡ : ಆಶಾ ಕಾರ್ಯಕರ್ತೆ ಮತ್ತು ಗ್ರಾಮ ಪಂಚಾಯತಿ ಸಿಪಾಯಿಯ ಸುಪುತ್ರಿಯಾದ ಜಯಶ್ರೀ ತಳವಾರ ಅವರು 09 ಚಿನ್ನದ ಪದಕಗಳನ್ನು ತನ್ನುಡಿಗೆ ಹಾಕಿಕೊಂಡು ಉತ್ತಮ ಸಾಧನೆ ತೋರಿದ್ದಾಳೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ 2022ರಲ್ಲಿ ಪ್ರವೇಶ ಪಡೆದು, ಉತ್ತಮವಾಗಿ ಅಭ್ಯಾಸ ಮಾಡಿ 2023-24ನೇ ಬ್ಯಾಚನ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದ ಜಯಶ್ರೀಗೆ ಸೆ.24ರಂದು ಧಾರವಾಡದ ಗಾಂಧೀ ಭವನದಲ್ಲಿ ನಡೆದ ಕರ್ನಾಟಕ ವಿಶ್ವ ವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ. ಸುಧಾಕರ ಅವರು ಪದಕ ಪ್ರದಾನ ಮಾಡಿದರು.
Hubballi:ತನಿಖೆ ಆಗದೇ ಪ್ರಾಸಿಕ್ಯೂಷನ್ ಪ್ರಶ್ನೆ ಎಲ್ಲಿಂದ ಬಂತು?- ಸಚಿವ ಸುಧಾಕರ
ಮುಖ್ಯ ಅತಿಥಿಗಳಾದ ಪ್ರೊ.ಎಸ್.ಅಯ್ಯಪ್ಪನ್, ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ, ಕುಲ ಸಚಿವರಾದ ಡಾ.ಎ.ಚನ್ನಪ್ಪ, ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಹಾಗೂ ಇನ್ನೀತರ ಗಣ್ಯರ ಸಮ್ಮುಖದಲ್ಲಿ ಜಯಶ್ರೀಗೆ ಪದಕ ನೀಡಿ ಗೌರವಿಸಲಾಯಿತು.
ಚಿನ್ನದ ಹುಡುಗಿ: ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಕೊಡಗಲಿ ಗ್ರಾಮದ ಜಯಶ್ರೀ ತಳವಾರ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದಿದ್ದಾರೆ. ಇವರ ತಾಯಿ ಮಂಜುಳಾ ಮಹಾಂತೇಶ ತಳವಾರ ಆಶಾ ಕಾರ್ಯಕರ್ತೆಯಾಗಿದ್ದಾರೆ. ಇವರ ತಂದೆ ಮಹಾಂತೇಶ ಹುನಗುಂದ ತಾಲೂಕಿನ ಹಿರೇಕೊಡಗಲಿ ಗ್ರಾಮದ ಗ್ರಾಮ ಪಂಚಾಯತನ ಗ್ರೂಪ್ ಡಿ ದರ್ಜೆಯ ಸಿಪಾಯಿಯಾಗಿದ್ದಾರೆ.
ಬಡತನದ ಕುಟುಂಬದಿಂದ ಬಂದಿದ್ದರೂ ಛಲತೊಟ್ಟು ಓದಿದ ಜಯಶ್ರೀ ಇದೀಗ ಚಿನ್ನದ ಹುಡುಗಿಯಾಗಿ ಮಿಂಚಿದ್ದಾಳೆ.
ಹಳ್ಳಿ ಹುಡುಗಿ: ಜಯಶ್ರೀ ತಳವಾರ ಅವರು ಗದಗ ಜಿಲ್ಲೆಯ ರೋಣ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣ ಪೂರೈಸಿದ್ದಾಳೆ. ಧಾರವಾಡದ ಹುರುಕಡ್ಲಿ ಮಹಿಳಾ ಕಾಲೇಜಿನಲ್ಲಿ ಪಿಯುಸಿ ಮತ್ತು ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಓದಿದ್ದಾಳೆ. ಹಾಸ್ಟೆಲನಲ್ಲಿದ್ದು ಓದಿರುವ ಜಯಶ್ರೀಯು ಹಳ್ಳಿ ಹುಡುಗಿಯಾಗಿ ಚಿನ್ನದ ಪದಕ ಗಿಟ್ಟಿಸಿರುವುದು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾದ ಸಂಗತಿಯಾಗಿದೆ.
ತಾಯಿ ಆಶಾ, ತಂದೆ ಸಿಪಾಯಿ: ಜಯಶ್ರೀ ಅವರ ಸಹೋದರಿ ಜ್ಯೋತಿ ತಳವಾರ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಲೈಬ್ರರಿ ಸಾಯಿನ್ಸ್ ಓದಿದ್ದಾಳೆ. ತನ್ನ ಓದಿಗೆ ತನ್ನ ಸಹೋದರಿ ಜ್ಯೋತಿ ನಿರಂತರ ಮಾರ್ಗದರ್ಶನ ಮಾಡುತ್ತಾಳೆ ಎನ್ನುತ್ತಾರೆ ಜಯಶ್ರೀ. ಇವರ ತಂದೆ ಸದ್ಯ ಹಿರೇಕೊಡಗಲಿ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಸಿಪಾಯಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಆಶಾ ಕಾರ್ಯಕರ್ತೆಯಾಗಿದ್ದಾರೆ.
ಆಶಾ ಕಾರ್ಯಕರ್ತೆ ಮತ್ತು ಸಿಪಾಯಿ ಮಗಳಾಗಿ ಜಯಶ್ರೀ ತಳವಾರ ಅವರು ವಿಶ್ವವಿದ್ಯಾಲಯದ ಮಟ್ಟದಲ್ಲಿ ಮಾಡಿದ ಸಾಧನೆಯು ಶ್ಲಾಘನೀಯ ಅನ್ನಿಸಿದೆ.
ತಾಯಿಯ ಶ್ರಮವೇ ಸ್ಪೂರ್ತಿ: ನನ್ನ ತಾಯಿಯ ದುಡಿಮೆ, ಅವಳು ರೂಢಿಸಿಕೊಂಡ ಪ್ರಾಮಾಣಿಕತೆ, ಒಳ್ಳೆಯವರಾಗಿ ಬಾಳಬೇಕು ಎನ್ನುವ ಅವರ ಉತ್ತಮ ವಿಚಾರಗಳು ನನಗೆ, ನನ್ನ ಓದಿಗೆ ಸದಾಕಾಲ ಸ್ಪೂರ್ತಿಯಾಗಿದೆ. ಧಾರವಾಡ ಕವಿವಿ
ಪತ್ರಿಕೋದ್ಯಮ ವಿಭಾಗದ ಹಿಂದಿನ ಮುಖ್ಯಸ್ಥರಾಗಿದ್ದ ಪ್ರೊ.ಜೆ.ಎಂ.ಚಂದುನವರ, ವಿಭಾಗದ ಈಗಿನ ಮುಖ್ಯಸ್ಥರಾದ ಡಾ.ಸಂಜಯ್ ಮಾಲಗತ್ತಿ, ಉಪನ್ಯಾಸಕರಾದ ಮಂಜುನಾಥ ಅಡಿಗಲ್, ಡಾ.ನಾಗರಾಜ, ಡಾ.ವಿಜಯಲಕ್ಷ್ಮಿ ಅವರು ಹಾಗೂ ಇನ್ನೀತರರು ತೋರಿದ ಮಾರ್ಗದರ್ಶನದಿಂದಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ.
ನನ್ನ ಸಾಧನೆಗೆ ಸದಾಕಾಲ ಒತ್ತಾಸೆಯಾದ ಎಲ್ಲ ಸ್ನೇಹಿತರ ಪ್ರೀತಿಗೆ ಅಭಿನಂದನೆ, ಹಳ್ಳಿಯ ಹುಡುಗಿಯರೂ ಸಾಧನೆ ಮಾಡಬಲ್ಲರು ಎನ್ನುವಂತೆ ನನ್ನಂಥವರಿಗೆ ಓದಿನ ರುಚಿ ಹತ್ತಿಸುವ ಈ ಧಾರವಾಡ ಮಣ್ಣಿಗೆ, ನೆಲಕ್ಕೆ ನಾನು ಸದಾ ಋಣಿ. ನಮ್ಮಂಥ ಬಡ ಹುಡುಗಿಯರಿಗೆ ತಾಯಿ ಪ್ರೀತಿ ತೋರಿ ಕರುಣಿಸಿದ ಧಾರವಾಡ ಜನರ ಪ್ರೀತಿಯನ್ನು ಎಂದಿಗೂ ಮರೆಯಲಾರೆ ಎನ್ನುತ್ತಾರೆ ಜಯಶ್ರೀ ತಳವಾರ.