ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಅತಿಶಿ ಸಿಂಗ್ ಇಂದು ಸಚಿವಾಲಯಕ್ಕೆ ತೆರಳಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿ ಸ್ಥಾನದ ಕುರ್ಚಿಯಲ್ಲಿ ಕೂರದೇ ಪಕ್ಕದಲ್ಲಿ ಮತ್ತೊಂದು ಕುರ್ಚಿ ಹಾಕಿಕೊಂಡು ಕೂತು ಕಡತಗಳಿಗೆ ಸಹಿ ಹಾಕುವ ಮೂಲಕ ಸಿಎಂ ಆಗಿ ಕೆಲಸ ಆರಂಭಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಮಾಯಣ ಮಹಾಕಾವ್ಯವನ್ನು ಉದಾಹರಣೆಯಾಗಿ ನೀಡಿ ಶ್ರೀರಾಮ ವನವಾಸಕ್ಕೆ ಹೋದಾಗ ಸಹೋದರ ಭರತ ರಾಮನ ಪಾದುಕೆಯನ್ನು ಸಿಂಹಾಸನದ ಮೇಲಿಟ್ಟು ಆಡಳಿತವನ್ನು ನಡೆಸಿದರು. ಅದೇ ರೀತಿ ನಾನು ಕೇಜ್ರಿವಾಲ್ ಸ್ಥಾನದಲ್ಲಿ ಕೂರುವುದಿಲ್ಲ. ಅವರನ್ನು ಮತ್ತೆ ಈ ಸ್ಥಾನಕ್ಕೆ ತರಲು ನಾಲ್ಕು ತಿಂಗಳು ಶ್ರಮಿಸುತ್ತೇನೆ ಎಂದರು.
ಈ ಕುರ್ಚಿ ಅರವಿಂದ್ ಕೇಜ್ರಿವಾಲ್ (Arvind Kejrival) ಅವರಿಗೆ ಸೇರಿದ್ದು, ಫೆಬ್ರವರಿ ಚುನಾವಣೆಯಲ್ಲಿ ದೆಹಲಿಯ ಜನರು ಮತ್ತೊಮ್ಮೆ ಅವರನ್ನು ತಮ್ಮ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಅಲ್ಲಿಯವರೆಗೆ ಈ ಕುರ್ಚಿ ಈ ಕಚೇರಿಯಲ್ಲಿ ಉಳಿಯುತ್ತದೆ. ಅವರು ಹಿಂದಿರುಗುವವರೆಗೆ ಕಾಯುತ್ತದೆ ಎಂದು ಹೇಳಿದರು.
ಕಾಂಗ್ರೆಸ್ನ ಶೀಲಾ ದೀಕ್ಷಿತ್ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ನಂತರ ಅತಿಶಿ ದೆಹಲಿಯ ಎಂಟನೇ ಮತ್ತು ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಅಕ್ರಮ ಅಬಕಾರಿ ನೀತಿಯಲ್ಲಿ ಬಂಧನವಾದ ಬಳಿಕ ಜಾಮೀನಿನ ಮೇಲೆ ಹೊರಬಂದ ಅರವಿಂದ್ ಕೇಜ್ರಿವಾಲ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.