ಕಿರಣ್ ರಾವ್ ನಿರ್ದೇಶನದ, ಆಮಿರ್ ಖಾನ್ ನಿರ್ಮಾಣದ ‘ಲಾಪತಾ ಲೇಡಿಸ್’ ಸಿನಿಮಾ ‘ಆಸ್ಕರ್ 2025’ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ. ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಈ ಚಿತ್ರ ಎಲ್ಲರಿಂದ ಮೆಚ್ಚುಗೆ ಪಡೆಯಿತು. ಒಟಿಟಿಯಲ್ಲಿ ರಿಲೀಸ್ ಆದ ಬಳಿಕ ಮತ್ತೊಂದಷ್ಟು ಮಂದಿ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಲಾಪತಾ ಲೇಡಿಸ್ ಸಿನಿಮಾ ಅಧಿಕೃತವಾಗಿ ಆಸ್ಕರ್ ಗೆ ಎಂಟ್ರಿಕೊಟ್ಟಿದೆ.
‘ಲಾಪತಾ ಲೇಡಿಸ್’ ಸಿನಿಮಾ ಮಹಿಳೆಯರ ಸಬಲೀಕರಣದ ಬಗ್ಗೆ ಇದ್ದು, ಚಿತ್ರದಲ್ಲಿ ನಿಶಾಂಶಿ ಗೋಯಲ್, ಪ್ರತಿಭಾ ರಾಂತಾ, ಸ್ಪರ್ಶ್ ಶ್ರೀವಾಸ್ತವ, ಚಾಯಾ ಕದಮ್, ರವಿ ಕಿಶನ್ ನಟಿಸಿದ್ದಾರೆ. ‘ಲಾಪತಾ ಲೇಡಿಸ್’ ಸಿನಿಮಾ ಆಸ್ಕರ್ ಗೆಲ್ಲಬೇಕು ಎಂಬುದು ಕಿರಣ್ ರಾವ್ ಅವರ ಕನಸಾಗಿದೆ. ಈ ಕನಸಿನ ಒಂದು ಹಂತವನ್ನು ಅವರು ಏರಿದ್ದಾರೆ.
‘ಲಾಪತಾ ಲೇಡಿಸ್’ ‘ಅತ್ಯುತ್ತಮ ವಿದೇಶಿ ಸಿನಿಮಾ’ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಚೆನ್ನೈನ್ನಲ್ಲಿ ‘ಭಾರತ ಫಿಲ್ಮ್ ಫೆಡರೇಷನ್’ ಸದಸ್ಯರು ಈ ಘೋಷಣೆ ಮಾಡಿದ್ದಾರೆ. ಈಗ ನಡೆಯಲಿರುವುದು 97ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಆಗಿದೆ.
ಕಳೆದ ವಾರ ಕಿರಣ್ ರಾವ್ ಅವರು ಈ ಬಗ್ಗೆ ಮಾತನಾಡಿದ್ದರು. ‘ಆಸ್ಕರ್ಗೆ ನಮ್ಮ ಸಿನಿಮಾ ಆಯ್ಕೆ ಆದರೆ ನನ್ನ ಕನಸು ಈಡೇರಿದಂತೆ. ಅದು ಒಂದು ಪ್ರಕ್ರಿಯೆ. ಲಾಪತಾ ಲೇಡಿಸ್ ಸಿನಿಮಾನ ಅವರು ಪರಿಗಣಿಸುತ್ತಾರೆ ಎಂದು ಭಾವಿಸಿದ್ದೇನೆ. ಅತ್ಯುತ್ತಮ ಸಿನಿಮಾ ಆಯ್ಕೆ ಆಗಲಿದೆ’ ಎಂದು ಅವರು ಭರವಸೆ ಹೊರಹಾಕಿದ್ದರು.
‘ಲಾಪತಾ ಲೇಡಿಸ್’ ಸಿನಿಮಾ 2001ರಲ್ಲಿ ನಡೆಯುವ ಗ್ರಾಮೀಣ ಭಾರತದ ಕಥೆಯನ್ನು ಹೊಂದಿದೆ. ಎರಡು ನವ ವಿವಾಹಿತರ ಕಥೆಯನ್ನು ಹೊಂದಿದೆ. ರೈಲ್ವೆ ಪ್ರಯಾಣದಲ್ಲಿ ವಧುವಿಬ್ಬರೂ ಬದಲಾಗುತ್ತಾರೆ. ಆ ಬಳಿಕ ಅನೇಕರ ಕಣ್ಣು ತೆಗೆಸುವ ಕೆಲಸವನ್ನು ಮಾಡುತ್ತದೆ.
ಥಿಯೇಟ್ರಿಕಲ್ ಬಿಡುಗಡೆಗೂ ಮುನ್ನ, ಚಲನಚಿತ್ರವು 2023 ರಲ್ಲಿ ಪ್ರತಿಷ್ಠಿತ ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶಿಸಲಾಯಿತು. ಫೆಸ್ಟಿವಲ್ನಲ್ಲಿ ಹಾಜರಿದ್ದ ಪ್ರೇಕ್ಷಕರಿಂದ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.