ಬೆಂಗಳೂರು: ಹತ್ತಾರು ವರ್ಷಗಳಿಂದ ಕಾವೇರಿ ನೀರಿಗಾಗಿ (, Bengaluru, DK )ಕಾದು ಕುಳಿತಿದ್ದ ಬೆಂಗಳೂರು ಹೊರವಲಯದ ಜನಕ್ಕೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಬಿಬಿಎಂಪಿ (BBMP) ವ್ಯಾಪ್ತಿಯ 110 ಹಳ್ಳಿಗಳಿಗೆ ಕೊನೆಗೂ ಕಾವೇರಿ ಹರಿಯಲು ಮೂಹೂರ್ತ ಫಿಕ್ಸ್ ಆಗಿದೆ.
ಕಳೆದ 17 ವರ್ಷಗಳ ಹಿಂದೆ ಬಿಬಿಎಂಪಿ ತೆಕ್ಕೆ ಸೇರಿದ್ದ 110 ಹಳ್ಳಿಗಳ ಜನರಿಗೆ ಕೊನೆಗೂ ಕಾವೇರಿ ನೀರು ಕುಡಿಯುವ ಭಾಗ್ಯ ಬಂದೊದಗಿದೆ. ಕಾವೇರಿ 5ನೇ ಹಂತದ ಯೋಜನೆಯಡಿ ನೀರು ಪೂರೈಸಲು ಜಲಮಂಡಳಿ ಸಜ್ಜಾಗಿದ್ದು, ಮುಂದಿನ ವಾರ ಕಾವೇರಿ 5 ಹಂತ ಯೋಜನೆಗೆ ಸರ್ಕಾರದಿಂದಲೇ ಹಸಿರು ನಿಶಾನೆ ಸಿಗಲಿದೆ.
ನಗರದ ಹೊರವಲಯದ 110 ಹಳ್ಳಿಗಳಿಗೆ ಜೂನ್ ಅಂತ್ಯದೊಳಗೆ ಕಾವೇರಿ ನೀರು ಪೂರೈಸುವುದಾಗಿ ಜಲಮಂಡಳಿ ಭರವಸೆ ನೀಡಿತ್ತು. ಆದರೆ, ಕಾಮಗಾರಿ ವಿಳಂಬ, ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದ ಯೋಜನೆ ಪೂರ್ಣ ಆಗಿರಲಿಲ್ಲ. ಈಗ ಇದ್ದ ಅಡೆತಡೆಗಳೆಲ್ಲ ಕಳೆದಿದ್ದು ಸಮಯ ಕೂಡಿ ಬಂದಿದೆ. ಆಗಸ್ಟ್ ತಿಂಗಳು ಪೂರ್ತಿ ಟ್ರಯಲ್ ರನ್ ಮಾಡಲಾಗಿದ್ದು, 110 ಹಳ್ಳಿಗಳಿಗೆ ಅಳವಡಿಸಿರುವ ನೂರಾರು ಕಿಮೀ ಉದ್ದದ ಕೊಳವೆಗಳನ್ನು ಹಂತ ಹಂತವಾಗಿ ಪರೀಕ್ಷಿಸಲಾಗುತ್ತಿದೆ.
ಬಹುತ್ತೇಕ ಕಡೆ ಕೊಳವೆಗಳಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ. ನೀರು ಹರಿಸಲು ಯೋಗ್ಯವಾಗಿದೆ ಎಂದು ಎಂಜಿನಿಯರ್ಗಳು ತಿಳಿಸಿದ್ದಾರೆ. ಹೀಗಾಗಿ ಮುಂದಿನವಾರವೇ ಯೋಜನೆ ಜಾರಿಗೊಳಿಸಲು ಜಲಮಂಡಳಿ ತಯಾರಿ ಆರಂಭಿಸಿದೆ.