ಚೆನ್ನೈ: 2025ರ ಐಪಿಎಲ್ ಟೂರ್ನಿ ಸಿಎಸ್ಕೆ (CSK) ತಂಡದ ಉಸಿರಾಗಿರುವ ಎಂ.ಎಸ್ ಧೋನಿ (MS Dhoni) ಅವರ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಬಿಸಿಸಿಐ ರಿಟೇನ್ ನಿಯಮದ ಕುರಿತು ಕೈಗೊಳ್ಳುವ ನಿರ್ಧಾರದ ಮೇಲೆ ಮಹಿ 2025ರ ಐಪಿಎಲ್ನಲ್ಲಿ ಕಣಕ್ಕಿಳಿಯುತ್ತಾರಾ? ಇಲ್ವಾ ಅನ್ನೋದು ಗೊತ್ತಾಗಲಿದೆ. ಈ ನಡುವೆ ಸಿಎಸ್ಕೆ ಫ್ರಾಂಚೈಸಿ ಉಳಿಸಿಕೊಳ್ಳಬಹುದಾದ ಐವರು ಆಟಗಾರರ ಕಿರುಪಟ್ಟಿಯನ್ನು (IPL 2025 Retention List) ಸಿದ್ಧಪಡಿಸಿದೆ.
ವರದಿಯ ಪ್ರಕಾರ, ಸಿಎಸ್ಕೆ ಮೆಗಾ ಹರಾಜಿಗೂ ಮುನ್ನವೇ ತಂಡದಲ್ಲಿ ಉಳಿಸಿಕೊಳ್ಳಲು ಬಯಸುವ ಐವರು ಆಟಗಾರರ ಕಿರು ಪಟ್ಟಿಯನ್ನು ಸಿದ್ಧಪಡಿಸಿದೆ ಎನ್ನಲಾಗಿದೆ.
ಬಿಸಿಸಿಐ (BCCI) ಆರ್ಟಿಎಂ (ರೈಟ್ ಟು ಮ್ಯಾಚ್) ಸೇರಿದಂತೆ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ನೀಡಿದೆ ಎಂಬ ವರದಿಗಳಿದ್ದರೂ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ. ಹಾಗಾಗಿ ಸದ್ಯದ ನಿಯಮದ ಪ್ರಕಾರ 4 ರಿಂದ 5 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದ್ದು, CSK ರಿಟೇನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ 5 ಆಟಗಾರರನ್ನ ಪಟ್ಟಿ ಮಾಡಿದೆ. ಈ ಪೈಕಿ ನಾಯಕ ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ, ಮಥೀಶ ಪತಿರನ ಮತ್ತು ಎಂ.ಎಸ್ ಧೋನಿ ಸ್ಥಾನ ಪಡೆದುಕೊಂಡಿದ್ದಾರೆ.
ರಿಟೇನ್ ಆಟಗಾರರ ಪಟ್ಟಿಯಲ್ಲಿ, ದೀಪಕ್ ಚಹಾರ್, ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್, ಮಹೇಶ್ ತೀಕ್ಷಣ, ರಚಿನ್ ರವೀಂದ್ರ ಸೇರಿ ಮುಂತಾದವರಿಗೆ ಸ್ಥಾನವಿಲ್ಲ. 2025ರ ಆವೃತ್ತಿಯ ಬಳಿಕ ಎಂ.ಎಸ್ ಧೋನಿ ಐಪಿಎಲ್ಗೆ ಗುಡ್ಬೈ ಹೇಳಲಿದ್ದಾರೆ ಎಂಬುದನ್ನು ಗಮನಿಸಿ ಫ್ರಾಂಚೈಸಿ ಪ್ರಮುಖ ಆಟಗಾರರನ್ನೂ ಹೊರದಬ್ಬಿ ಮಹಿ ಅವರನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ಮುಂದಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.