ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದು, ಶನಿವಾರ ಡೆಲವೇರ್ನ ವಿಲ್ಮಿಂಗ್ಟನ್ಗೆ ಆಗಮಿಸಿದರು. ಈ ವೇಳೆ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಬೈಡನ್ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಾರೆ.
ಭೇಟಿಯ ವೇಳೆ ಮೋದಿ ಹಾಗೂ ಬೈಡನ್ ಪರಸ್ಪರ ಆಲಿಂಗನ ಮಾಡಿಕೊಂಡರು. ಬಳಿಕ ಮೋದಿಯ ಕೈ ಹಿಡಿದುಕೊಂಡು ಬೈಡನ್ ತಮ್ಮ ನಿವಾಸಕ್ಕೆ ಕರೆದೊಯ್ದರು. ನಂತರ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳು ಹಾಗು ಜಾಗತಿಕ, ಪ್ರಾದೇಶಿಕ, ಇಂಡೋ-ಫೆಸಿಫಿಕ್ ಮತ್ತು ಅದರ ಹೊರತಾದ ಅನೇಕ ವಿಚಾರಗಳ ವಿನಿಮಯ ಮಾಡಿದರು.
ಇದಕ್ಕೂ ಮುನ್ನ ಫಿಲಡೆಲ್ಫಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಭಾರತೀಯ ಸಮುದಾಯದವರು ಆತ್ಮೀಯವಾಗಿ ಸ್ವಾಗತಿಸಿದರು. ಮೋದಿಯನ್ನು ಸ್ವಾಗತಿಸಲು ಭಾರತೀಯರು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದರು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ‘ಮೋದಿ, ಮೋದಿ’ ಎಂಬ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಪ್ರಧಾನಿ ಕೆಲವರ ಕೈ ಕುಲುಕಿ ಇನ್ನು ಕೆಲವರಿಗೆ ಆಟೋಗ್ರಾಫ್ ನೀಡಿದರು. ನಂತರ ಮೋದಿ ವಿಲ್ಮಿಂಗ್ಟನ್ಗೆ ಪ್ರಯಾಣ ಬೆಳೆಸಿದರು.
ಮೋದಿ ಭೇಟಿಯ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬೈಡನ್, ‘ಇತಿಹಾಸದಲ್ಲೇ ಇದೀಗ ಭಾರತದೊಂದಿಗೆ ಅಮೆರಿಕ ಶಕ್ತಿಯುತ, ನಿಕಟ ಪಾಲುದಾರಿಕೆ ಹೊಂದಿದೆ. ಪ್ರತಿ ಬಾರಿ ನಾವು ಒಟ್ಟಿಗೆ ಕುಳಿತಾಗ ನನಗೆ ಹೊಸ ಪ್ರದೇಶಗಳಲ್ಲಿ ನಮ್ಮ ಸಹಕಾರದ ಕುರಿತು ಹೊಳೆಯುತ್ತದೆ. ಈ ನಿಟ್ಟಿನಲ್ಲಿ ಇವತ್ತಿನ ದಿನವೂ ಹೊರತಲ್ಲ’ ಎಂದು ತಿಳಿಸಿದ್ದಾರೆ.
ಕ್ವಾಡ್ ಶೃಂಗಸಭೆಗೂ ಮುನ್ನ ಇಬ್ಬರು ನಾಯಕರು ಪರಸ್ಪರ ಭೇಟಿ ಮಾಡಿದರು. ಎರಡೂ ದೇಶಗಳ ಸಮಾನ ಆಸಕ್ತಿಯ ಕ್ಷೇತ್ರಗಳು ಮತ್ತು ಜಾಗತಿಕ, ಪ್ರಾದೇಶಿಕ ಹಾಗು ಇಂಡೋ-ಫೆಸಿಫಿಕ್ ವ್ಯಾಪ್ತಿ ಹಾಗು ಅದರ ಹೊರತಾದ ವಿಚಾರಗಳು ಚರ್ಚೆಯಾದವು ಎಂದು ಭಾರತ ವಿದೇಶಾಂಗ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.