ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ತಮ್ಮ ಟೆಸ್ಟ್ ವೃತ್ತಿ ಜೀವನವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಆರಂಭಿಕ 10 ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಮೊದಲನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಆ ಮೂಲಕ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅವರ 51 ವರ್ಷಗಳ ಹಳೆಯ ದಾಖಲೆಯನ್ನು ಯುವ ಬ್ಯಾಟ್ಸ್ಮನ್ ಮುರಿದಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು 1973ರಲ್ಲಿ ಆಡಿದ್ದ ತಮ್ಮ ಆರಂಭಿಕ 10 ಟೆಸ್ಟ್ ಪಂದ್ಯಗಳಿಂದ 978 ರನ್ಗಳನ್ನು ಕಲೆ ಹಾಕಿದ್ದರು. ಇದೀಗ ಯಶಸ್ವಿ ಜೈಸ್ವಾಲ್ ಅವರು ತಮ್ಮ ಆರಂಭಿಕ 10 ಟೆಸ್ಟ್ ಪಂದ್ಯಗಳಿಂದ 1094 ರನ್ಗಳನ್ನು ಗಳಿಸಿದ್ದಾರೆ. ಆ ಮೂಲಕ 51 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.