ಮೈಸೂರು: ನಾಡಹಬ್ಬ ದಸರಾ 2024 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಮೈಸೂರಲ್ಲಿ ಸಕಲ ಸಿದ್ಧತೆ ನಡೆದಿದ್ದು , ಐತಿಹಾಸಿಕ ಜಂಬೂಸವಾರಿಗೆ ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ತಾಲೀಮು ನಡೆಸಲಾಗಿದೆ. ಇದೆಲ್ಲದರ ನಡುವೆ ದಸರಾ ಉದ್ಘಾಟಕರು ಯಾರು ಎಂಬ ಕೌತುಕಕ್ಕೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಮೈಸೂರು ದಸರಾ 2024 ಉದ್ಘಾಟನೆಗೆ ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯರನ್ನು ಆಹ್ವಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಂ.ಪ.ನಾಗರಾಜಯ್ಯ ಅವರು ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕ. ‘ಹಂಪನಾ’ ಕಾವ್ಯನಾಮದಿಂದ ಬರೆಯುವ ನಾಗರಾಜಯ್ಯ ಮೂಲತಃ ಗೌರಿಬಿದನೂರು ತಾಲೂಕಿನ ಹಂಪಸಂದ್ರದವರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ನಂತರ ಮಂಡ್ಯ, ದಾವಣಗೆರೆ,
Vastu Tips: ನಿಮ್ಮ ಮನೆಯಲ್ಲಿ ಈ ವಸ್ತುಗಳನ್ನು ಹೀಗೆ ಇಟ್ಟರೆ ಸಾಕು ಲಕ್ಷಾಧಿಪತಿ ಆಗ್ತೀರಾ.!
ಶಿವಮೊಗ್ಗ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದರು. ಸೆಂಟ್ರಲ್ ಕಾಲೇಜಿಗೆ ಸೇರಿದ ಅವರು ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಮೌಲಿಕ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ.
ಹಂಪನಾ ಅವರ ಸಾಹಿತ್ಯ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ತಮ್ಮಣರಾವ ಅಮ್ಮಿನಭಾವಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಜೋಶಿ ಪ್ರಶಸ್ತಿ, ಆಚಾರ್ಯ ಸುಮತಿ ಸಾಗರ ಶ್ರುತ ಸಂವರ್ಧನ ಪುರಸ್ಕಾರಗಳು ಸಂದಿವೆ.
ಇನ್ನೂ ದಸರಾ ಸಮೀಪಿಸುತ್ತಿದ್ದಂತೆ ಅರಮನೆಯಲ್ಲಿ ದಸರಾ ಸಿದ್ದತೆಗಳು ಭರದಿಂದ ಸಾಗಿದೆ. ಈ ನಡುವೆ ಅರಮನೆಗೆ ಅಳವಡಿಸಿರುವ 20 ಸಾವಿರ ಬಲ್ಬ್ ಬದಲಾಯಿಸುತ್ತಿದ್ದರೆ, ಮತ್ತೊಂದೆಡೆ ಅರಮನೆ ಗೋಡೆಗಳಿಗೆ ಸುಣ್ಣ ಬಣ್ಣ ಬಳಿಯಲಾಗುತ್ತಿದೆ.
ವಿದ್ಯುತ್ ದೀಪಗಳಿಂದ ಕಂಗೊಳಿಸುವ ಮೈಸೂರು ಅರಮನೆ ನೋಡುವುದಕ್ಕೆ ಎರಡು ಕಣ್ಣುಗಳೇ ಸಾಲದು. ಅಷ್ಟೊಂದು ಅದ್ಭುತವಾಗಿ ದೀಪಾಲಂಕಾರದಲ್ಲಿ ಅರಮನೆ ಕಂಗೊಳಿಸುತ್ತೆ. ಇದೀಗ ದಸರಾ ಸಮೀಪಿಸುತ್ತಿದ್ದಂತೆ ಅರಮನೆಯಲ್ಲಿ ಅಳವಡಿಸಿರುವ ದೀಪಗಳಲ್ಲಿ ಕೆಟ್ಟುಹೋಗಿರುವ ವಿದ್ಯುತ್ ದೀಪಗಳನ್ನು ಬದಲಾಯಿಸುವ ಕಾರ್ಯ ಭರದಿಂದ ಸಾಗಿದೆ.