ಇತ್ತೀಚೆಗೆ ನಕಲಿ ಆಧಾರ್ ಕಾರ್ಡ್ ಗಳ ಬಳಕೆ ಹೆಚ್ಚಾಗಿದೆ. ಇದೀಗ ಅದಕ್ಕೆ ಕಡಿವಾಣ ಹಾಕಲು ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಯಾವುದೇ ಆಸ್ತಿ ನೋಂದಣಿಗೂ ಮುನ್ನಾ ಕಾರ್ಡ್ ದೃಢೀಕರಣ ಪರಿಶೀಲನೆಯನ್ನು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಈಗ ಪ್ರತಿ ಕಚೇರಿಯಲ್ಲಿಯೂ ಐರಿಸ್ ಸ್ಕ್ಯಾನ್ ಯಂತ್ರ ಮತ್ತು ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಎಲ್ಲಾ 256 ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ಐರಿಸ್ ಸ್ಕ್ಯಾನ್ ಯಂತ್ರ ಮತ್ತು ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದೆ. ಈ ಹಿಂದೆ ನಕಲಿ ಆಧಾರ್ ಕಾರ್ಡ್ ತಯಾರಿಸಿ ತಮ್ಮ ಹೆಸರಿಗೆ ಆಸ್ತಿ ನೋಂದಾಯಿಸಲು ಜನರು ನಡೆಸಿದ ಪ್ರಯತ್ನಗಳ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಬಯಸಿದ್ದು, ನೋಂದಣಿಗೂ ಮುನ್ನಾ ಆಸ್ತಿ ನೋಂದಾಯಿಸಲು ಬಯಸುವ ವ್ಯಕ್ತಿಯ ಬೆರಳಚ್ಚು ಮತ್ತು ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ಐರಿಸ್ ಸ್ಕ್ಯಾನ್ ಯಂತ್ರ ಪ್ರತಿದಿನ ಪರಿಶೀಲಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ತಂತ್ರಜ್ಞಾನ ನೋಂದಣಿ ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ನಿಜವಾದ ಆಸ್ತಿ ಮಾಲೀಕರನ್ನು ರಕ್ಷಿಸಲು ಇದನ್ನು ಮಾಡಲಾಗುತ್ತಿದೆ. ಈ ಯಂತ್ರಗಳ ದರ 1 ರಿಂದ 1.5 ಲಕ್ಷ ಆಗಲಿದ್ದು, ನಮ್ಮ ಎಲ್ಲಾ ಕಚೇರಿಗಳಿಗೆ ಹೊಸ ಉಪಕರಣಗಳನ್ನು ಖರೀದಿಸಿದ್ದೇವೆ. ಇದರಲ್ಲಿ UIDAI ಇಲಾಖೆಯ ಸಿಬ್ಬಂದಿ ಭಾಗಿಯಾಗಿಲ್ಲ. ನಮ್ಮ ಸಿಬ್ಬಂದಿಯೊಂದಿಗೆ ಮಾತ್ರ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.