ಭಾರತ ತಂಡದ ಹಿರಿಯ ಸ್ಪಿನ್ ಆಲ್ರೌಂಡರ್ ರವಿಚಂದ್ರನ್ ಅವರು ಬಾಂಗ್ಲಾದೇಶ ವಿರುದ್ದ ಮೊದಲನೇ ಟೆಸ್ಟ್ ಪಂದ್ಯದ ಆರಂಭಿಕ ದಿನ ಶತಕವನ್ನು ಸಿಡಿಸಿದ್ದಾರೆ. ಇಲ್ಲಿ ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ತವರು ಅಭಿಮಾನಿಗಳ ಎದುರು ಆರ್ ಅಶ್ವಿನ್ ತಮ್ಮ ಟೆಸ್ಟ್ ವೃತ್ತಿ ಜೀವನದ ಆರನೇ ಶತಕ ಸಿಡಿಸಿದ್ದು ಅತ್ಯಂತ ವಿಶೇಷವಾಗಿದೆ. ಆರ್ ಅಶ್ವಿನ್ ಪಾಲಿಗೆ ಚೆನ್ನೈನಲ್ಲಿ ಎರಡನೇ ಟೆಸ್ಟ್ ಶತಕ ಇದಾಗಿದೆ.
ಮತ್ತೊಂದೆಡೆ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಆರ್.ಅಶ್ವಿನ್, ಬಾಂಗ್ಲಾ ಬೌಲರ್ಗಳ ಬೆವರಿಳಿಸಿ ಅದ್ಭುತ ಶತಕ ಸಿಡಿಸಿ ಮಿಂಚಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ 8ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಅಶ್ವಿನ್, ಜಡೇಜಾ ಜೊತೆ ಉತ್ತಮ ಜೊತೆಯಾಟ ಕಟ್ಟಿದರು. ಹಾಗೆಯೇ ತಂಡದ ಇನ್ನಿಂಗ್ಸ್ಗೆ ವೇಗ ನೀಡಿದ ಅಶ್ವಿನ್ ಅಮೋಘವಾಗಿ ಬ್ಯಾಟ್ ಬೀಸುವ ಮೂಲಕ ಶತಕ ಸಿಡಿಸಿ ಮಿಂಚಿದರು. ಕೇವಲ 108 ಎಸೆತಗಳಲ್ಲಿ ತಮ್ಮ 6ನೇ ಟೆಸ್ಟ್ ಶತಕವನ್ನು ಪೂರೈಸಿದ ಅಶ್ವಿನ್ಗೆ ತವರು ನೆಲದಲ್ಲಿ ಇದು ಎರಡನೇ ಶತಕವಾಗಿದೆ.
15 ಫೆಬ್ರವರಿ 2021 ರಂದು ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿದ್ದ ಅಶ್ವಿನ್ ಇದೀಗ ಬರೋಬ್ಬರಿ 1312 ದಿನಗಳ ನಂತರ ಮತ್ತೊಮ್ಮೆ ಚೆನ್ನೈನಲ್ಲಿ ಶತಕದ ಇನ್ನಿಂಗ್ಸ್ ಕಟ್ಟಿದ್ದಾರೆ. ತಮ್ಮ ಇನ್ನಿಂಗ್ಸ್ನಲ್ಲಿ ಇದುವರೆಗೆ 112 ಎಸೆತಗಳನ್ನು ಎದುರಿಸಿರುವ ಅಶ್ವಿನ್, 10 ಬೌಂಡರಿ ಹಾಗೂ 2 ಬೌಂಡರಿ ಸಹಿತ ಅಜೇಯ 102 ರನ್ ಕಲೆಹಾಕಿದ್ದಾರೆ.