ಕೋಲ್ಕತ್ತ:- ಆಸ್ತಿ ವಿವಾದ ಹಿನ್ನೆಲೆ ನಡು ರಸ್ತೆಯಲ್ಲೇ ಮಹಿಳೆಗೆ ಕೋಲಿನಿಂದ ಗಂಡಸರ ಗುಂಪೊಂದು ಥಳಿಸಿದ ಘಟನೆ ಜರುಗಿದೆ.
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ ಎಂಬಂತಾಗಿದ್ದು, ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ಬೆನ್ನಲ್ಲೇ ಮಮತಾ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ಹೊರ ಹಾಕಿದ್ದಾರೆ.
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಘಟನೆ ಜರುಗಿದೆ. ವೈರಲ್ ವಿಡಿಯೋದಲ್ಲಿ ಪುರುಷರು ಮಹಿಳೆಯನ್ನು ರಸ್ತೆಗೆ ಎಳೆದು ದೊಣ್ಣೆಯಿಂದ ಥಳಿಸಿದ್ದಾರೆ. ಈ ಘಟನೆಯನ್ನು ವೀಕ್ಷಿಸುತ್ತಿದ್ದ ಗ್ರಾಮಸ್ಥರು ಸುತ್ತಲೂ ನೆರೆದಿದ್ದರೂ ಯಾರೂ ಸಹಾಯಕ್ಕೆ ಮುಂದಾಗಲಿಲ್ಲ. ಈ ಮಹಿಳೆಯ 16 ವರ್ಷದ ಮಗಳು ಕೂಡ ತನ್ನ ತಾಯಿಯನ್ನು ಉಳಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಗ್ರಾಮಸ್ಥರ ಪ್ರಕಾರ, ಆ ಮಹಿಳೆಯ ಕುಟುಂಬ ಮತ್ತು ಅವರ ನೆರೆಹೊರೆಯವರ ನಡುವಿನ ದೀರ್ಘಕಾಲದ ಜಮೀನು ವಿವಾದದಿಂದ ಈ ಹಲ್ಲೆ ನಡೆದಿದೆ. ಸಂತ್ರಸ್ತೆ ಮೋತಾಬರಿ ಪೊಲೀಸ್ ಠಾಣೆಯಲ್ಲಿ 6 ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಪೊಲೀಸರು, “ಈ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಲಿಖಿತ ದೂರುಗಳನ್ನು ದಾಖಲಿಸಿದ್ದಾರೆ. ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.