ಹುಬ್ಬಳ್ಳಿ: ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ (ಎನ್ಎಎಫ್ಎಲ್ಡಿ) ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಇಲ್ಲಿನ ಎಚ್ಸಿಜಿ –ಸುಚಿರಾಯು ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಯಕೃತ್ ಕಸಿ ಮಾಡಿದ್ದಾರೆ.
‘ರೋಗಿಯು ಕೊನೆಯ ಹಂತದ ಎನ್ಎಎಫ್ಎಲ್ಡಿಯಿಂದ ಬಳಲುತ್ತಿದ್ದರು. ಅಲ್ಲದೆ, ಅಧಿಕ ರಕ್ತದೊತ್ತಡ, ಮಧುಮೇಹ ಸಹ ಇತ್ತು’ ಎಂದು ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಡಾ.ಬಸಂತ್ ಮಹದೇವಪ್ಪ ಹೇಳಿದರು.
‘ಆಗಸ್ಟ್ 15ರಂದು ಯಕೃತ್ ಸಿಕ್ಕಿದ್ದರಿಂದ 10–12 ಗಂಟೆ ನಿರಂತರವಾಗಿ ಶಸ್ತ್ರಚಿಕಿತ್ಸೆ ನಡೆಸಿ, ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಯಕೃತ್ ಅನ್ನು ಅವರಿಗೆ ಅಳವಡಿಸಲಾಯಿತು’ ಎಂದು ತಿಳಿಸಿದರು.
‘ಇದಕ್ಕೂ ಮುನ್ನ ರೋಗಿಯು ಎಚ್ಸಿಜಿ ಸುಚಿರಾಯು ಆಸ್ಪತ್ರೆಯ ಗ್ಯಾಸ್ಟ್ರೊ ಎಂಟರಾಲಜಿಸ್ಟ್ ಡಾ.ಸಂದೀಪ್ ಅವರ ಬಳಿ 14 ತಿಂಗಳು ಚಿಕಿತ್ಸೆ ಪಡೆದಿದ್ದರು. ಲಿವರ್ ಕಸಿ ಅತ್ಯಂತ ಕ್ಲಿಷ್ಟಕರ ಪ್ರಕ್ರಿಯೆ. ಕಸಿ ಮಾಡಿದ ನಂತರ ಅವರು ಗುಣಮುಖರಾಗಿದ್ದು, ಸೆ.9ರಂದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ’ ಎಂದರು.
‘ರೋಗಿಯು ಮದ್ಯ ಸೇವನೆ ಮಾಡುತ್ತಿರಲಿಲ್ಲ. ಆದರೂ, ಮಧುಮೇಹ, ಸ್ಥೂಲಕಾಯ, ಹೈಪರ್ ಕೊಲೆಸ್ಟ್ರಾಲ್ ಕಾರಣದಿಂದಾಗಿ ಲಿವರ್ಗೆ ಹಾನಿಯಾಗಿತ್ತು. ಜಾಂಡಿಸ್, ಕಾಲು ಬಾವು, ಕಿಡ್ನಿಗೆ ಹಾನಿ, ವಾಂತಿ ಮತ್ತು ಭೇದಿಯಾದಾಗ ರಕ್ತ ಬರುವುದು ಲಿವರ್ಗೆ ಹಾನಿಯಾಗಿರುವುದರ ಲಕ್ಷಣಗಳು. ಇದರ ಪತ್ತೆಗೆ ಪ್ರತಿ ವರ್ಷ ಆಲ್ಟ್ರಾಸೌಂಡ್ ತಪಾಸಣೆಗೆ ಒಳಗಾಗಬೇಕು’ ಎಂದು ಸಲಹೆ ನೀಡಿದರು.
ರೋಗಿ (ರೋಗಿಯ ಹೆಸರು ಗೋಪ್ಯವಾಗಿರಿಸಲಾಗಿದೆ) ಮಾತನಾಡಿ, ‘ಎಚ್ಸಿಜಿ ಸುಚಿರಾಯು ಆಸ್ಪತ್ರೆಯ ವೈದ್ಯರ ತಂಡದ ಶ್ರಮದಿಂದ ನನಗೆ ಮರುಜೀವ ಸಿಕ್ಕಿದೆ. ಇಲ್ಲಿ ಕಡಿಮೆ ಖರ್ಚಿನಲ್ಲಿ ಯಕೃತ್ ಕಸಿ ಮಾಡಿದ್ದಾರೆ’ ಎಂದು ಹೇಳಿದರು.
ಗ್ಯಾಸ್ಟ್ರೊ ಎಂಟರಾಲಜಿಸ್ಟ್ ಡಾ.ಸಂದೀಪ್ ಕುಂಬಾರ, ಸಂಜೀವ್ ಚಟ್ನಿ, ಜಯಪ್ರಭು ಉತ್ತೂರು, ಕಿರಣ್, ಶಿಫಾಲಿ ಪೂಜಾರಿ, ಡಾ.ಮಸೂದ್, ಡಾ.ರಮೇಶ್, ಡಾ.ಪ್ರಸಾದ್ ಭಂಡಿ ಇದ್ದರು.