ಒಂದು ಕಾಲದಲ್ಲಿ 50-60 ವರ್ಷ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೃದಯ (Heart) ಸಂಬಂಧಿ ಕಾಯಿಲೆಗಳು ಹಾಗೂ ಹೃದಯಾಘಾತ ಈಗ ಕೇವಲ 5-10 ವರ್ಷದವರಲ್ಲೇ ಕಂಡು ಬರುತ್ತಿದೆ. ಇನ್ನೂ ಇತ್ತೀಚಿನ ವರದಿಯ ಪ್ರಕಾರ 30 ವರ್ಷ ವಯಸ್ಸಿನ ಆಸುಪಾಸಿನ ಯುವ ಜನರಲ್ಲೇ ಹೃದಯದ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಅಲ್ಲದೇ 30 ವರ್ಷ ವಯಸ್ಸಿನ ಆಸುಪಾಸಿನವರೇ ಅತಿ ಹೆಚ್ಚು ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗೆ (Heart bypass surgeries) ಒಳಗಾಗುತ್ತಿದ್ದಾರೆ ಎಂದು ವೈದ್ಯರು ಆತಂಕ ಹೊರಹಾಕಿದ್ದಾರೆ. ಅಲ್ಲದೇ ಅದಕ್ಕೆ ಕಾರಣವಾಗಿರುವ ಆತಂಕಕಾರಿ ಅಂಶಗಳನ್ನು ಉಲ್ಲೇಖಿಸಿ ವರದಿ ನೀಡಿದ್ದಾರೆ.
ಬೈಪಾಸ್ ಸರ್ಜರಿ ಎಂದರೇನು?
ಹೃದಯದ ನರಗಳು ಬ್ಲಾಕ್ ಆಗಿ ರಕ್ತ ಸಂಚಾರಕ್ಕೆ ತಡೆಯಾಗಿದ್ದಾಗ ಮಾಡುವಂತಹ ಸರ್ವೇ ಸಾಮಾನ್ಯವಾದಂತಹ ಶಸ್ತ್ರಚಿಕಿತ್ಸೆ ಇದಾಗಿದೆ. ಹೃದಯದ ನರಗಳು ಸಾಮಾನ್ಯ ಬ್ಲಾಕ್ ಆಗಿದ್ದಾಗ ಮಾತ್ರೆಗಳಿಂದ ಸರಿ ಮಾಡಲಾಗುತ್ತದೆ. ಮಾತ್ರೆಗಳ ಮೂಲಕ ರಕ್ತನಾಳಗಳು ಹಿಗ್ಗುವಂತೆ ಮಾಡಿ ಅಥವಾ ರಕ್ತ ತೆಳುವಾಗುವಂತೆ ಮಾಡಿ ರಕ್ತ ಸಂಚಾರ ಸರಿಯಾಗುವಂತೆ ಮಾಡಲಾಗುತ್ತದೆ. ಇದನ್ನ ಸುಮಾರು 50-60% ಜನರಿಗೆ ಇದನ್ನೇ ಮಾಡಲಾಗತ್ತೆ.
ಇನ್ನೂ ಕೆಲವರಿಗೆ 1 ಅಥವಾ 2 ಕಡೆ 70-80% ಬ್ಲಾಕ್ ಇದ್ದಾಗ, ಎಂಜಿಯೋಪ್ಲಾಸ್ಟ್ರಿ ಮಾಡಿ ಸರಿಪಡಿಸಲಾಗುತ್ತದೆ.
ಇನ್ನೂ ಕೆಲವರಿಗೆ ರಕ್ತನಾಳಗಳಲ್ಲಿ ಹೆಚ್ಚಿನ ಬ್ಲಾಕ್ಗಳಿದ್ದಾಗ (100% ಬ್ಲಾಕ್ ಆಗಿದ್ದಾಗ) ಅದನ್ನು ಸರಿಪಡಿಸಲು ಮಾಡುವಂತಹ ಶಸ್ತ್ರಚಿಕಿತ್ಸೆಯನ್ನ ಬೈಪಾಸ್ ಸರ್ಜರಿ ಎಂದು ಎಂದು ಕರೆಯಲಾಗುತ್ತದೆ. ಇದನ್ನು ಹೃದಯದ ಬಡಿತ ಇದ್ದಾಗಲೂ, ಅಥವಾ ಹೃದಯದ ಬಡಿತ ನಿಲ್ಲಿಸಿಯೂ ಮಾಡಲಾಗುತ್ತದೆ. ಈಗ ರೋಬೋಟ್ ತಂತ್ರಜ್ಞಾನದಿಂದ ಸಹ ಈ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಈ ಸರ್ಜರಿಯಲ್ಲಿ ಕೆಲವೊಮ್ಮೆ ವ್ಯಕ್ತಿಯ ಬೇರೆ ಅಂಗಗಳಲ್ಲಿನ ರಕ್ತನಾಳವನ್ನು ತೆಗೆದು ಹೃದಯದಲ್ಲಿ ಬ್ಲಾಕ್ ಆಗಿರುವ ನರಗಳಿಗೆ ಜೋಡಿಸಲಾಗುತ್ತದೆ.
ಹೆಚ್ಚುತ್ತಿರುವ ಹೃದಯದ ಸಮಸ್ಯೆಗಳಿಗೆ ಕಾರಣಗಳೇನು?
30 ರ ಆಸುಪಾಸಿನ ಯುವ ಜನರಲ್ಲಿ ಹೃದಯದ ಸಮಸ್ಯೆ ಹಿಂದೆ ಭಾರೀ ವಿರಳವಾಗಿತ್ತು. ಆದರೆ ಇಂದು ಯುವಜನರಲ್ಲಿ ಹೃದಯದ ಸಮಸ್ಯೆ ಬಹಳ ಸಾಮಾನ್ಯ ಎಂಬಂತಾಗಿದೆ. ಜಡ ಜೀವನಶೈಲಿ, ಒತ್ತಡ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳಿಂದಾಗಿ ಈ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಯುವ ಜನರಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ದಿನಕ್ಕೆ ಕನಿಷ್ಟ ಬೆಂಗಳೂರಿನಲ್ಲಿ 30-40 ಬೈಪಾಸ್ ಸರ್ಜರಿ ನಡೆಯುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಬೈಪಾಸ್ ಸರ್ಜರಿ ಬಗ್ಗೆ ವೈದ್ಯರು ಹೇಳೋದೇನು?
ಕಳೆದ ದಶಕದಲ್ಲಿ ಮಧ್ಯವಯಸ್ಕರಲ್ಲಿ ರೋಗಿಗಳಲ್ಲಿ ಬೈಪಾಸ್ ಶಸ್ತ್ರಚಿಕಿತ್ಸೆ 30% ಹೆಚ್ಚಾಗಿದೆ. 30ರ ದಶಕದಲ್ಲಿ ಪ್ರತಿ ವರ್ಷ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳ ಸಂಖ್ಯೆ 5 ರಂತೆ ಏರಿಕೆ ಕಂಡಿದೆ. ಅಲ್ಲದೇ ಕಿರಿಯ ವ್ಯಕ್ತಿಗಳಲ್ಲಿ ಹೃದಯಾಘಾತವು ಹೆಚ್ಚು ಸಾಮಾನ್ಯವಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ, ಹೃದಯಾಘಾತಗಳು ಹೆಚ್ಚಾಗುತ್ತಿವೆ. ಅದರಲ್ಲೂ ಕಡಿಮೆ ವಯಸ್ಸಿನ ಜನರಲ್ಲೇ ಬೈಪಾಸ್ ಶಸ್ತ್ರಚಿಕಿತ್ಸೆಗಳ ಅಗತ್ಯತೆ ಕಂಡು ಬರುತ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಜಡ ಜೀವನಶೈಲಿ, ಕಳಪೆ ಆಹಾರ ಮತ್ತು ಒತ್ತಡದದಿಂದ ಹೃದಯದ ಸಮಸ್ಯೆ ಹೆಚ್ಚಾಗಿದೆ. ಹೃದಯದಲ್ಲಿ ಅನೇಕ ರಕ್ತನಾಳಗಳು ಬ್ಲಾಕ್ ಆದಾಗ ಬೈಪಾಸ್ ಶಸ್ತ್ರಚಿಕಿತ್ಸೆ ಅಗತ್ಯವಾಗಿ ಮಾಡಬೇಕಾಗುತ್ತದೆ. ಹೆಚ್ಚಿನ ಕ್ಯಾಲೋರಿ ಬಳಕೆ ಮತ್ತು ಯಾವುದೇ ದೈಹಿಕ ಚಟುವಟಿಕೆ, ಆಧುನಿಕ ಜೀವನಶೈಲಿಯು ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ವೈದ್ಯರು.
ಹೃದಯರೋಗವು ಸಾಂಪ್ರದಾಯಿಕವಾಗಿ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. ಇಂದಿನ ದಿನಗಳಲ್ಲಿ ಒತ್ತಡ, ಮಾಲಿನ್ಯ ಮತ್ತು ಜೀವನಶೈಲಿಯು ಯುವಜನರನ್ನು ದುರ್ಬಲಗೊಳಿಸುತ್ತಿದೆ.
ಅನೇಕರು ಹೃದಯ ಸಂಬಂಧಿ ರೋಗಲಕ್ಷಣಗಳನ್ನು ಗುರುತಿಸಲು ವಿಳಂಬ ಮಾಡುತ್ತಾರೆ. ಅಲ್ಲದೇ ಹೃದಯದ ಸಮಸ್ಯೆಯನ್ನು ಗ್ಯಾಸ್ಟ್ರಿಕ್ ಎಂದು ತಪ್ಪಾಗಿ ಗ್ರಹಿಸುತ್ತಾರೆ. ಉತ್ತಮ ಜೀವನಶೈಲಿ, ಆರಂಭಿಕ ಪತ್ತೆ ಮತ್ತು ಹೃದಯಾಘಾತದ ಲಕ್ಷಣಗಳ ಬಗ್ಗೆ ಸಾರ್ವಜನಿಕ ಶಿಕ್ಷಣದ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಹೃದಯಘಾತಕ್ಕೆ ಪ್ರಮುಖ ಕಾರಣಗಳು
ದೈನಂದಿನ ಒತ್ತಡದ ಜೀವನಶೈಲಿ, ಅತಿಯಾದ ಮಾನಸಿಕ ಒತ್ತಡ ಹಾಗೂ ಆಹಾರಕ್ರಮದಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಇಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗಲು ಕಾರಣ. ಇದರ ಹೊರತಾಗಿ ನೋಡುವುದಾದರೆ, ಮಧು ಮೇಹ ಕಾಯಿಲೆ ಇದ್ದವರು, ಹೈ ಕೊಲೆಸ್ಟ್ರಾಲ್ ಹಾಗೂ ಅಧಿಕ ರಕ್ತದೊತ್ತಡದ ಕಾಯಿಲೆಯಿಂದ ಬಳಲುತ್ತಿರುವವರಲ್ಲಿಯೂ ಕೂಡ ಹೃದಯಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಬಹಳ ಬೇಗನೇ ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.
ಹೃದಯದ ಆರೋಗ್ಯ ಚೆನ್ನಾಗಿರಬೇಕು ಎಂದರೆ ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ, ಯೋಗಾಭ್ಯಾಸ ಮಾಡುವುದು, ವರ್ಷಕ್ಕೆ ಒಮ್ಮೆಯಾದರೂ ಹೃದಯದ ಪರೀಕ್ಷೆ ಮಾಡಿಸಿಕೊಳ್ಳುವುದು, ದೇಹದ ತೂಕ ಹಾಗೂ ಬೊಜ್ಜನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು. ಹೃದಯಕ್ಕೆ ಮಾರಕವಾಗಿರುವ ಅಭ್ಯಾಸಗಳಿಂದ ದೂರವಿರುವುದು. ಉದಾಹರಣೆಗೆ ಧೂಮಪಾನ ಮತ್ತು ಮಧ್ಯಪಾನವನ್ನು ಬಿಟ್ಟುಬಿಡುವುದು ಇವೆಲ್ಲವೂ ಕೂಡ ಹೃದಯದ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುತ್ತವೆ.