ಬೆಂಗಳೂರು:- ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದಾಗ ಯುವಕನಿಗೆ ನಿಫಾ ವೈರಸ್ ತಗುಲಿ, ಮೃತಪಟ್ಟಿದ್ದು, ಯುವಕನ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಹೈ ಅಲರ್ಟ್ ಆಗಿದೆ. ಕೇರಳ ಹಾಗೂ ವಿಶೇಷವಾಗಿ ಕರ್ನಾಟಕಕ್ಕೆ ಕಟ್ಟೆಚ್ಚರ ವಹಿಸಲು ಎಚ್ಚರಿಕೆ ನೀಡಿದೆ. ಈ ಮಧ್ಯೆ ನಿಫಾಗೆ ಬಲಿಯಾದ ಯುವಕನ ಅಂತ್ಯಸಂಸ್ಕಾರಕ್ಕೆ ಕೇರಳಕ್ಕೆ ತೆರಳಿದ್ದ 15 ಸ್ನೇಹಿತರು ಬೆಂಗಳೂರಿಗೆ ಆಪತ್ತು ತಂದಿದ್ದಾರೆ ಎನ್ನಲಾಗಿದೆ.
ಉತ್ಪಾದನೆ ಕುಸಿತ, ದರ ಏರಿಕೆ: ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ ಬೆಲೆ!
ಸಪ್ಟೆಂಬರ್ 8 ರಂದು ಕೇರಳದ ಮಲಪ್ಪುರಂನಲ್ಲಿ ನಿಫಾಗೆ ಯುವಕ ಬಲಿಯಾಗಿದ್ದಾನೆ. ಅಂದೇ ಬೆಂಗಳೂರಿನಿಂದ ಆತನ 14 ಸ್ನೇಹಿತರು ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಕೇಂದ್ರದ ಸೂಚನೆ ಬೆನ್ನಲ್ಲೇ ಅಲರ್ಟ್ ಆದ ಆರೋಗ್ಯ ಇಲಾಖೆ ಯುವಕರನ್ನು ಟ್ರ್ಯಾಕ್ ಮಾಡಿದೆ.
ಅಷ್ಟೂ ಜನ ಯುವಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಯುವಕರ ರಕ್ತ ಹಾಗೂ ಸೆರಂ ಸ್ಯಾಂಪಲ್ ಲ್ಯಾಬ್ಗೆ ಕಳುಹಿಸಲಾಗಿದೆ. ಅದರ ವರದಿ ಇನ್ನೆರಡು ದಿನಗಳಲ್ಲಿ ಹೊರಬೀಳುವ ಸಾಧ್ಯತೆ ಇದೆ. ನಿಫಾ ಗುಣಲಕ್ಷಣಗಳ ಬಗ್ಗೆ ಆರೋಗ್ಯ ಇಲಾಖೆ ವಿಶೇಷವಾಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದು ಇಲಾಖೆಯ ಆಯುಕ್ತ ಶಿವಕುಮಾರ್ ತಿಳಿಸಿದ್ದಾರೆ.
ಕೇರಳದಿಂದ ಬೆಂಗಳೂರಿಗೆ ಬರುವವರ ಮೇಲೂ ಹದ್ದಿನ ಕಣ್ಣಿಡಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ, ನಗರಕ್ಕೆ ಆತಂಕ ತಂದಿರುವ ಸ್ನೇಹಿತರ ಆರೋಗ್ಯದ ಬಗ್ಗೆ ಇಲಾಖೆ ಕಣ್ಣಿಟ್ಟಿದೆ. ಜ್ವರ, ಕೆಮ್ಮು, ತಲೆನೋವು, ವಾಂತಿ, ತಲೆತಿರುಗುವಿಕೆ, ಗಂಟಲು ನೋವು, ಅರೆ ನಿದ್ರಾವಸ್ಥೆ ಲಕ್ಷಣಗಳು ಕಾಣಿಸಿದರೆ ಐಸೊಲೇಷನ್ ಮಾಡಲು ನಿರ್ಧರಿಸಿದೆ.