ಮೊಟ್ಟೆ ಅತ್ಯಂತ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರಗಳಲ್ಲಿ ಒಂದಾಗಿದೆ. ಸುಮಾರು 90ಪ್ರತಿಶತದಷ್ಟು ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಒಂದು ಮೊಟ್ಟೆ ಯ ಸೇವನೆಯಿಂದ ದೇಹಕ್ಕೆ ಸಿಗುತ್ತದೆ. ಮೊಟ್ಟೆಯ ಬಿಳಿಭಾಗ ಇತರ ಆಹಾರಕ್ಕೆ ಹೋಲಿಸಿದರೆ ಅರ್ಧದಷ್ಟು ಪ್ರೋಟೀನ್ ಹೊಂದಿರುತ್ತೆ. ಹಾಗಾಗಿ ಆರೋಗ್ಯಕರ ದಿನಚರಿಗೆ ಮೊಟ್ಟೆಯನ್ನು ನಮ್ಮ ಡಯಟ್ನಲ್ಲಿ ಸೇರಿಸಿದರೆ ಒಳ್ಳೆಯದು ಎನ್ನುತ್ತಾರೆ ವೈದ್ಯರು.
ಮೊಟ್ಟೆ ಸಾಮಾನ್ಯವಾಗಿ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಪ್ರೋಟೀನ್ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ಮೊಟ್ಟೆ ಶಾಖವನ್ನು ಉತ್ಪಾದಿಸುವ ಗುಣವನ್ನು ಹೊಂದಿರುತ್ತದೆ. ಬೇಸಿಗೆ ಯಲ್ಲಿ ನಮ್ಮ ದೇಹದ ತಾಪವೂ ಹೆಚ್ಚಾಗಿರುವುದರಿಂದ ಹೆಚ್ಚು ಮೊಟ್ಟೆಯ ಸೇವನೆ ಅಜೀರ್ಣ ಮತ್ತು ಅಸ್ವಸ್ಥತೆಯನ್ನುಂಟುಮಾಡಬಹುದು. ಆದರೆ ಮಿತವಾಗಿ ಸೇವಿಸಿದರೆ ಅತ್ಯುತ್ತಮ.
ನಿಸ್ಸಂಶಯವಾಗಿ 40 ರ ನಂತರ ಮೊಟ್ಟೆಗಳನ್ನು ಸೇವನೆ ಮಾಡಬಹುದು. ಏಕೆಂದರೆ ವಯಸ್ಸಾದವರಲ್ಲಿ ಕಡಿಮೆಯಾಗುತ್ತಿರುವ ಸ್ನಾಯುವಿನ ದ್ರವ್ಯರಾಶಿಯನ್ನು ಪುನರ್ ತುಂಬಿಸುವಲ್ಲಿ ಮೊಟ್ಟೆಗಳು ದೊಡ್ಡ ಕೊಡುಗೆಗಳನ್ನು ನೀಡುತ್ತದೆ.
ವಯಸ್ಸಾದವರಲ್ಲಿ ದಿನದಿಂದ ದಿನಕ್ಕೆ ಸ್ನಾಯುವಿನ ಸಮಸ್ಯೆಗಳು ಹೆಚ್ಚಾಗುತ್ತಾ ಬರುತ್ತದೆ. ಇದನ್ನು ಪರಿಣಾಮಕಾರಿಯಾಗಿ ಪ್ರೋಟೀನ್ ನಿಂದ ಸಮೃದ್ಧವಾಗಿರುವ ಆಹಾರಗಳಿಂದ ತಕ್ಕ ಮಟ್ಟಿಗೆ ಪರಿಹಾರ ಮಾಡಿಕೊಳ್ಳಬಹುದು. ತಮ್ಮ ಆಹಾರದಲ್ಲಿ ಪ್ರತಿನಿತ್ಯ ಕನಿಷ್ಟ ಪಕ್ಷ ಒಂದೊಂದು ಮೊಟ್ಟೆಗಳನ್ನು ಸೇವನೆ ಮಾಡುವುದರಿಂದ ಪ್ರೋಟೀನ್ ಯಥೇಚ್ಚವಾಗಿ ದೊರೆಯುತ್ತದೆ.
40 ರ ನಂತರ ಮೊಟ್ಟೆಯ ಸೇವನೆಯು ಜೀರ್ಣಕ್ರಿಯೆಗೆ ಯಾವುದೇ ರೀತಿಯ ತೊಡಕನ್ನು ಉಂಟು ಮಾಡುವುದಿಲ್ಲ. ಅಲ್ಲದೆ, ವಯಸ್ಸಾದವರಿಗೆ ವಿಟಮಿನ್ ಡಿ ಮತ್ತು ಒಮೆಗಾ3 ಕೊಬ್ಬಿನಾಮ್ಲಗಳು ಸೇರಿದಂತೆ ಅನೇಕ ಪ್ರಮುಖ ಪೋಷಕಾಂಶಗಳ ಅಗತ್ಯವಿದೆ ಎಂದು ಕೂಡ ಅಧ್ಯಯನಗಳು ಹೇಳುತ್ತವೆ.
ಮೊಟ್ಟೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು
ಮುಖ್ಯವಾಗಿ ಕೊಲೆಸ್ಟ್ರಾಲ್ ಬಗ್ಗೆ ಹೆಚ್ಚು ಚಿಂತಿಸುವ ಜನರು ತಮ್ಮ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸುವುದನ್ನು ನಿರಾಕರಿಸುತ್ತಾರೆ. ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಅನ್ನು ಮಿತವಾಗಿ ಸೇವನೆ ಮಾಡುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಕಂಡು ಬರುವುದಿಲ್ಲ ಎಂದು ಸಂಶೋಧನಾ ಅಧ್ಯಯನಗಳು ಸಾಬೀತು ಪಡಿಸಿವೆ. ಹಾಗಾಗಿ 40 ರ ನಂತರ ಯಾವುದೇ ಹಿಂಜರಿಕೆ ಇಲ್ಲದೆ, ಉತ್ತಮ ಪೋಷಕಾಂಶವುಳ್ಳ ಮೊಟ್ಟೆಗಳನ್ನು ಪ್ರತಿನಿತ್ಯ ಸೇವನೆ ಮಾಡಿ.
ಒಂದು ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವನೆ ಮಾಡಬೇಕು?
ಅಷ್ಟಕ್ಕೂ ಒಂದು ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವನೆ ಮಾಡುವುದು ಉತ್ತಮ ಎಂಬುದನ್ನು ಇಲ್ಲಿ ತಿಳಿಯಿರಿ. ಆರೋಗ್ಯ ತಜ್ಞರ ಪ್ರಕಾರ, 40 ದಾಟಿದ ವ್ಯಕ್ತಿಗಳು ವಾರದಲ್ಲಿ ಕನಿಷ್ಟ 7 ಮೊಟ್ಟೆಗಳನ್ನು ಸೇವಿಸಬೇಕು. ಮೊಟ್ಟೆಯನ್ನು ಉತ್ತಮ ಕೊಲೆಸ್ಟ್ರಾಲ್ ನ ಅತ್ಯುತ್ತಮವಾದ ಮೂಲವೆಂದು ಪರಿಗಣಿಸಲಾಗಿದೆ. ಅಲ್ಲದೆ, 40 ರ ನಂತರ ಪ್ರೋಟೀನ್ ಅನ್ನು ಹೊಂದಲು ಮೊಟ್ಟೆಗಳನ್ನು ಸೇವನೆ ಮಾಡಬಹುದು. ಪ್ರತಿನಿತ್ಯ ಒಂದೊಂದು ಮೊಟ್ಟೆಯನ್ನು ನೀವು ಸೇವನೆ ಮಾಡಬಹುದು.