ಬೆಂಗಳೂರು: ರಾಜ್ಯದಲ್ಲಿ ಹಾಲಿನ ದರ ಏರಿಕೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ ಬೆನ್ನಲ್ಲೇ ಸಾಕಷ್ಟು ಪರ ಹಾಗೂ ವಿರೋಧ ಚರ್ಚೆಗಳಾಗುತ್ತಿವೆ. ಸಚಿವರು, ಶಾಸಕರು ಬೆಲೆ ಏರಿಕೆ ಕುರಿತು ಸಮರ್ಥನೆ ಮಾಡಿಕೊಂಡರೆ, ಸಾಮಾನ್ಯ ಜನರು ಹಾಗೂ ರೈತರು ಸರ್ಕಾರವು ರೈತರ ಹೆಸರು ಹೇಳಿಕೊಂಡು ಬೆಲೆ ಏರಿಕೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ನಂದಿನಿ ಹಾಲಿನ ದರ ಏರಿಕೆ ಮಾಡುವುದಾಗಿ ಕೆಲವು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿಯೇ ಘೋಷಣೆ ಮಾಡಿದ್ದರು. ದರ ಹೆಚ್ಚಳದ ಲಾಭ ರೈತರಿಗೆ ದೊರೆಯುವಂತೆ ಮಾಡುವುದಾಗಿಯೂ ಹೇಳಿದ್ದರು. ಆದರೆ, ಬೆಲೆ ಹೆಚ್ಚಳದ ಪ್ರಯೋಜನ ನಮಗೆ ದೊರೆಯುವುದಿಲ್ಲ ಎಂದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರು ಹೇಳಿದ್ದಾರೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿವೆ. ಅವಿಭಜಿತ ಜಿಲ್ಲೆಗಳಲ್ಲಿ ಸುಮಾರು ಒಂದುವರೆ ಲಕ್ಷಕ್ಕೂ ಅಧಿಕ ಜನ ಹಾಲು ಉತ್ಪಾದಕರಿದ್ದಾರೆ. ಜೊತೆಗೆ ಕಳೆದ ವರ್ಷ ರಾಜ್ಯ ಸೇರಿದಂತೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿವೆ. ಹೀಗಿರುವಾಗ, ರಾಜ್ಯದಲ್ಲಿ ರೈತರು ಹಾಗೂ ಹಾಲು ಉತ್ಪಾದಕರ ನೆರವಿಗೆ ನಿಲ್ಲಬೇಕಿದ್ದ ರಾಜ್ಯ ಸರ್ಕಾರ ರೈತ ವಿರೋಧಿ ದೋರಣೆ ಅನುಸರಿಸುತ್ತಿದೆ ಎಂದು ರೈತರು ಮತ್ತು ವಿಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆ.