ಮಹಾ ಮಾರಿ ಕ್ಯಾನ್ಸರ್ ಗೆ ಔಷಧಿ ಕಂಡು ಹಿಡಿಯಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಇದೀಗ ಮಾಡರ್ನಾ ಪಾರ್ಮಾಸೆಟಿಕಲ್ಸ್ ಕಂಪನಿ ಕ್ಯಾನ್ಸರ್ಗೆ ಹೊಸ ಲಸಿಕೆಯನ್ನು ಕಂಡು ಹಿಡಿದಿದೆ. ಈ ಲಸಿಕೆ ಕ್ಯಾನ್ಸರ್ ರೋಗದ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.
ಮಾಡರ್ನಾ ಪಾರ್ಮಾಸೆಟಿಕಲ್ಸ್ ಕಂಪನಿ ರೋಗಿಗಳಲ್ಲಿ ಹೊಸ ಆಶಾಭಾವವನ್ನು ಮೂಡಿಸಿದೆ. ಕೋವಿಡ್ ವ್ಯಾಕ್ಸಿನ್ ತಯಾರಿಕೆಯಲ್ಲಿ ಬಳಸಲಾದ mRNA ತಂತ್ರಜ್ಞಾನವನ್ನೇ ಬಳಸಿ ಈ ಒಂದು ಲಸಿಕೆಯನ್ನು ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಕಂಡು ಹಿಡಿದಿರುವ ಈ ವ್ಯಾಕ್ಸಿನ್ಗೆ mRNA-4359 ಎಂದು ಹೆಸರಿಡಲಾಗಿದೆ. ಕೊರೊನಾ ಲಸಿಕೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ದೇಹದಲ್ಲಿರುವ ಆರೋಗ್ಯಕರ ಸೆಲ್ಸ್ಗಳನ್ನ ಅಪಾಯದಿಂದ ಪ್ರತ್ಯೇಕಿಸುತ್ತಿತ್ತು. ಇದೇ ಮಾದರಿಯ ಲಸಿಕೆಯನ್ನು ಈಗ ಕ್ಯಾನ್ಸರ್ ಲಸಿಕೆಯ ತಯಾರಿಕೆಯಲ್ಲಿ ವಿಸ್ತರಿಸಲಾಗಿದೆ.
ಆರಂಭಿಕ ಹಂತದ ಕ್ಲಿನಿಕಲ್ ಟ್ರಯಲ್ನಲ್ಲಿ ದೊಡ್ಡ ಮಟ್ಟದ ಟ್ಯೂಮರ್ ಹೊಂದಿದ್ದ 19 ರೋಗಿಗಳು, ಕ್ಯಾನ್ಸರ್ ಟ್ಯೂಮರ್ ಈಗಷ್ಟೇ ವೃದ್ಧಿಯಾಗುತ್ತಿರುವ 8 ರೋಗಿಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದ್ದು ಯಾವುದೇ ಅಡ್ಡಪರಿಣಾಮವಿಲ್ಲದೇ ಲಸಿಕೆ ರೋಗಿಗಳ ಮೇಲೆ ಉತ್ತಮ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ.
ಡಾ. ದೇಬಾಶಿಸ್ ಸರ್ಕೇರ್ ವ್ಯಾಕ್ಸಿನ್ ಟ್ರಯಲ್ನ ಮುಖ್ಯ ತನಿಖಾಧಿಕಾರಿ ಹೇಳುವ ಪ್ರಕಾರ ಅಡ್ವಾನ್ಸ್ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಇದೊಂದು ಪ್ರಮುಖ ಅಸ್ತ್ರ. ತುಂಬಾ ಭರವಸೆಯೊಂದಿಗೆ ಮಹಾಮಾರಿ ಕ್ಯಾನ್ಸರ್ಗೆ ಒಂದು ಚಿಕಿತ್ಸೆಯು ದೊರಕಿದಂತಾಗಿದೆ ಅದು ಕೂಡ ಯಾವುದೇ ಅಡ್ಡಪರಿಣಾಮಗಳಿಲ್ಲದೇ ರೋಗವಾಸಿ ಮಾಡುವತ್ತ ಈ ಒಂದು ಹೊಸ ಅಧ್ಯಯನ ಸಾಗಿದೆ. ಇದು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಕ್ಯಾನ್ಸರ್ಗೆ ಚಿಕಿತ್ಸೆಯಾಗಲಿದೆ ಎಂದು ಹೇಳಿದ್ದಾರೆ.