ದೆಹಲಿ: ಆಮ್ ಆದ್ಮಿ ಪಕ್ಷದ ನಾಯಕರೂ ಆಗಿರುವ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. 48 ಗಂಟೆಗಳ ಒಳಗಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಇನ್ನೂ 24 ಗಂಟೆ ಬಾಕಿ ಉಳಿದಿದೆ. ಈ ನಡುವೆ ದೆಹಲಿಯ ಸಿಎಂ ಗದ್ದುಗೆಗೆ ಪೈಪೋಟಿ ಶುರುವಾಗಿದೆ.
ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ (Liquor Policy Case) ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೇ ಸೆಪ್ಟೆಂಬರ್ 13ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆ ಬಳಿಕ ಮೊದಲ ಭಾಷಣ ಮಾಡಿದ ಕೇಜ್ರಿವಾಲ್ ರಾಜೀನಾಮೆ ಘೋಷಿಸಿದರು. ಅಲ್ಲದೇ ಜನತೆ ತೀರ್ಪು ನೀಡುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಈ ನಡುವೆ ಆಪ್ನಲ್ಲೇ ಇರುವ ದಿಗ್ಗಜ ನಾಯಕರ ನಡುವೆ ಪೈಪೋಟಿ ಶುರುವಾಗಿದೆ.
ಸದ್ಯ ಸಿಎಂ ರೇಸ್ನಲ್ಲಿ ಸಚಿವೆ ಅತಿಶಿ (Atishi), ಮೂರು ಬಾರಿ ಶಾಸಕರಾಗಿರುವ ಸೌರಭ್ ಭಾರದ್ವಾಜ್, ರಾಘವ್ ಛಡ್ಡಾ, ಕೈಲಾಶ್ ಗೆಹ್ಲೋಟ್ ಹಾಗೂ ಸಂಜಯ್ ಸಿಂಗ್ ಅವರ ಹೆಸರು ಕೇಳಿಬಂದಿದೆ. ಸಚಿವ ಸಂಪುಟ ಸಭೆಯ ಬಳಿಕ ದೆಹಲಿಗೆ ನೂತನ ಸಿಎಂ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ವರದಿಗಳು ಉಲ್ಲೇಖಿಸಿವೆ.