ಬೆಂಗಳೂರು: ಮಾನವ ಸರಪಳಿ (Human Chain) ರಚಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಮಾಡಿದ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ (H.D Kumaraswamy) ಕಿಡಿಕಾರಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿರೋ ಕುಮಾರಸ್ವಾಮಿ, ಪ್ರಜಾಪ್ರಭುತ್ವ ಉಳಿಸುವ ಕಾಳಜಿ ಇದ್ದರೇ ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ (Local Body Elections) ಮಾಡಿ ಅಂತ ಸಿಎಂ ಸಿದ್ದರಾಮಯ್ಯಗೆ (Siddaramaiah) ಸವಾಲ್ ಹಾಕಿದ್ದಾರೆ.
ಹೆಚ್ಡಿಕೆ ಎಕ್ಸ್ನಲ್ಲಿ ಏನಿದೆ?
ಮಾನವ ಸರಪಳಿ ನೆಪದಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಪ್ರಜಾಪ್ರಭುತ್ವ ಉಳಿಸುವ ಕಾಳಜಿಯೇ ಇಲ್ಲ. ಇದ್ದರೇ ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ. ಅಧಿಕಾರಕ್ಕೇರಿದಾಗಿನಿಂದ ಪ್ರಜಾಪ್ರಭುತ್ವದ ಸರಪಳಿಯ ತಳಮಟ್ಟದ ಆಧಾರಸ್ತಂಭಗಳಾದ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಮತ್ತು ಬಿಬಿಎಂಪಿ ಚುನಾವಣೆ ನಡೆಸಿಲ್ಲ, ಯಾಕೆ?
ಸ್ಥಳೀಯ ಸರ್ಕಾರಗಳ ಕತ್ತು ಹಿಸುಕಿ ನೀವು ವಿಧಾನಸೌಧದಲ್ಲಿ ಮೆರೆದರೇನು ಭಾಗ್ಯ? ಮಾನ್ಯ ಸಿದ್ದರಾಮಯ್ಯನವರೇ, ನೀವು ಅಧಿಕಾರಕ್ಕೆ ಬಂದು ವರ್ಷದ ಮೇಲೆ 4 ತಿಂಗಳಾಯಿತು (2023 ಮೇ 20). ಈವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ನಿಮ್ಮ ಪ್ರಜಾಪ್ರಭುತ್ವ, ಜನಪರತೆ, ಜಾಹೀರಾತುಗಳಲ್ಲಷ್ಟೆ ಝಗಮಗಿಸುತ್ತಿದೆ. ನಿಮ್ಮದು ಪ್ರಚಾರ ಜಾಸ್ತಿ, ಆಚಾರ ನಾಸ್ತಿ.
ವಿಚ್ಚಿಧ್ರ ಶಕ್ತಿಗಳನ್ನು ದಮನ ಮಾಡುವುದು ಎಂದರೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಕ್ಕೆ ತಿಲಾಂಜಲಿ ಇಡುವುದೇ? ಮಾನವ ಸರಪಳಿಯಿಂದ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಜನರ ತೆರಿಗೆ ಹಣದ ಪೋಲು ಪ್ರಜಾಪ್ರಭುತ್ವಕ್ಕೆ ಭೂಷಣವೇ? ಮೊದಲು ಸ್ಥಳೀಯ ಸಂಸ್ಥೆ ಚುನಾವಣೆ ಘೋಷಿಸಿ. ನೈಜ ಪ್ರಜಾಪ್ರಭುತ್ವದ ಸರಪಳಿಯನ್ನು ಗಟ್ಟಿಗೊಳಿಸಿ ಅಂತ ಕುಮಾರಸ್ವಾಮಿ ಟ್ವೀಟ್ ಮಾಡಿ ಸರ್ಕಾರಕ್ಕೆ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.