ಇಂದು ಮುಸ್ಲಿಂ ಬಾಂಧವರು ಈದ್-ಈ-ಮಿಲಾದ್-ಉನ್-ನಬಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ದಿನವು ಮುಸ್ಲಿಂ ಸಮುದಾಯದವರಿಗೆ ಮಹತ್ವಪೂರ್ಣ ದಿನವಾಗಿದೆ. ಈ ದಿನ ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಜನಿಸಿದರು. ಮತ್ತು ಜನಿಸಿದ ಅದೇ ದಿನದಂದು ಅವರು ಮರಣವನ್ನು ಹೊಂದಿದ್ದರು.
ಈದ್-ಈ-ಮಿಲಾದ್-ಉನ್-ನಬಿ ಹಬ್ಬವನ್ನು ಈದ್-ಈ-ಮಿಲಾದ್ ಅಥವಾ ಮೌಲಿದ್ ಎಂದೂ ಕರೆಯುತ್ತಾರೆ. ಭಾರತ ಹಾಗೂ ಪ್ರಪಂಚದ ಹಲವು ದೇಶಗಳಲ್ಲಿ ಇದನ್ನು ಮುಸ್ಲಿಂ ಸಮುದಾಯದ ಜನರು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ದಿನ ಮುಹಮ್ಮದ್ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಮೆರವಣಿಗೆಗಳನ್ನು ಕೈಗೊಳ್ಳಲಾಗುತ್ತದೆ.
ಈದ್- ಎ- ಮಿಲಾದ್ ಮಹತ್ವ:
ಈದ್- ಎ- ಮಿಲಾದ್ ಮುಸ್ಲಿಂ ಸಮುದಾಯದ ಜನರಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನವನ್ನು ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸುತ್ತಾರೆ. ಈದ್ ಮಿಲಾದ್ ಉನ್ ನಬಿಯನ್ನು ಇಸ್ಲಾಮಿಕ್ ಕ್ಯಾಲೆಂಡರ್ ನ ಮೂರನೇ ತಿಂಗಳಾದ ರಬಿ ಉಲ್ ಅವ್ವಾಲ್ ನ 12 ನೇ ದಿನದಂದು ಆಚರಿಸಲಾಗುತ್ತದೆ. ಈ ದಿನವು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವನ್ನು ಸೂಚಿಸುತ್ತದೆ.
ಈ ದಿನವು ಪವಿತ್ರ ಪ್ರವಾದಿಯ ದಯೆ, ಸಹಾನುಭೂತಿ ಮತ್ತು ಬೋಧನೆಗಳನ್ನು ನೆನಪಿಸುವುದರಿಂದ ಈ ದಿನವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ಹಬ್ಬವನ್ನು ಶಿಯಾ ಮತ್ತು ಸುನ್ನಿ ಮುಸ್ಲಿಮರು ವಿಭಿನ್ನ ದಿನಾಂಕಗಳಲ್ಲಿ ಆಚರಿಸುತ್ತಾರೆ. ಸುನ್ನಿ ಮುಸ್ಲಿಮರು ಇಸ್ಲಾಮಿಕ್ ಧರ್ಮದ 12 ನೇ ದಿನದಂದು ಈ ದಿನವನ್ನು ಆಚರಿಸಿದರೆ, ಶಿಯಾ ಮುಸ್ಲಿಮರು ರಬಿ ಉಲ್ ಅವ್ವಾಲ್ ನ 17 ನೇ ದಿನದಂದು ಈ ದಿನವನ್ನು ಆಚರಿಸುತ್ತಾರೆ.
ಈದ್ ಮಿಲಾದ್ ಉನ್ ನಬಿಯನ್ನು ಹೇಗೆ ಆಚರಿಸುತ್ತಾರೆ?
ಜನರು ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ತಯಾರಿಯನ್ನು ಪ್ರಾರಂಭಿಸುತ್ತಾರೆ. ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸುಂದರ ವರ್ಣರಂಜಿತ ದೀಪಗಳು ಮತ್ತು ಧ್ವಜಗಳಿಂದ ಅಲಂಕರಿಸುತ್ತಾರೆ. ಅಲ್ಲದೆ ಈ ದಿನವನ್ನು ಬಹಳ ಆಡಂಭರದಿಂದ ಆಚರಿಸುತ್ತಾರೆ, ಹಸಿರು ಬಣ್ಣವು ಇಸ್ಲಾಂ ಅನ್ನು ಸೂಚಿಸುವುದರಿಂದ ಅವರು ತಮ್ಮ ಕೈಯಲ್ಲಿ ಹಸಿರು ಬ್ಯಾಂಡ್ಗಳನ್ನು ಕಟ್ಟುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುವುದು, ಸಿಹಿ ತಿಂಡಿಗಳನ್ನು ವಿತರಿಸುವುದು ಮತ್ತು ಮಸೀದಿಗೆ ಭೇಟಿ ನೀಡುವುದು ಈ ದಿನದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.
ಮುಸ್ಲಿಂ ಜನರು ಈ ದಿನ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ ಮತ್ತು ಅಲ್ಲಾಹನ ಆಶೀರ್ವಾದವನ್ನು ಪಡೆಯುತ್ತಾರೆ. ಮಹಿಳೆಯರು ಶೀರ್ ಖುರ್ಮಾ ಮತ್ತು ಸೇವಾಯನ್ ನಂತಹ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಜೊತೆಗೆ ತಮ್ಮ ಸಂಬಂಧಿಕರನ್ನು ಮನೆಗೆ ಆಹ್ವಾನಿಸಿ ಅವರೊಂದಿಗೆ ಈ ದಿನವನ್ನು ಆಚರಿಸುತ್ತಾರೆ. ಕೆಲವರು ಅಲ್ಲಾಹನನ್ನು ಪೂಜಿಸಲು ಮತ್ತು ಆಶೀರ್ವಾದ ಪಡೆಯಲು ಹಾಜಿ ಅಲಿ ದರ್ಗಾ,
ಜಮಾ ಮಜ್ಜಿದ್, ನಿಜಾಮುದ್ದೀನ್ ಔಲಿಯಾ, ಅಜ್ಮೀರ್ ಶರೀಫ್ ನಂತಹ ಪ್ರಮುಖ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಈ ಪವಿತ್ರ ದಿನದಂದು ದಾನ ಮಾಡುವುದು ಹೆಚ್ಚು ಲಾಭದಾಯಕವೆಂದು ಪರಿಗಣಿಸಲಾಗಿದೆ. ಪ್ರವಾದಿ ಮುಹಮ್ಮದ್ ದಯೆ ಮತ್ತು ಮಾನವೀಯತೆಯಲ್ಲಿ ನಂಬಿಕೆ ಇಟ್ಟಿದ್ದರು ಹಾಗಾಗಿ ಅಲ್ಲಾಹನಿಗೆ ನಿಜವಾಗಿಯೂ ಸಮರ್ಪಿತರಾಗಿರುವ ಜನರು, ದೇಣಿಗೆಗಳನ್ನು ನೀಡುತ್ತಾರೆ ಮತ್ತು ಅಗತ್ಯವಿರುವ ಬಡ ಜನರಿಗೆ ದಾನ ಮಾಡುತ್ತಾರೆ.