ಭಾರತ ತಂಡದ ಮಾಜಿ ನಾಯಕ ಹಾಗೂ ರನ್ ಮಶೀನ್ ಖ್ಯಾತಿಯ ವಿರಾಟ್ ಕೊಹ್ಲಿಗೆ ಬೌಲ್ ಮಾಡುವ ಸವಾಲನ್ನು ಆನಂದಿಸುತ್ತೇನೆಂದು ಆಸ್ಟ್ರೇಲಿಯಾ ತಂಡದ ಹಿರಿಯ ವೇಗಿ ಮಿಚೆಲ್ ಸ್ಟಾರ್ಕ್ ಹೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಮಿಚೆಲ್ ಸ್ಟಾರ್ಕ್ ಇಬ್ಬರೂ ಸಾಕಷ್ಟು ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎದುರಾಗಿದ್ದಾರೆ. ಹಲವು ಬಾರಿ ವಿರಾಟ್ ಕೊಹ್ಲಿಯನ್ನು ಮಿಚೆಲ್ ಸ್ಟಾರ್ಕ್ ಔಟ್ ಮಾಡಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಕೀ ಆಟಗಾರನಾದರೆ, ಆಸ್ಟ್ರೇಲಿಯಾ ತಂಡಕ್ಕೆ ಮಿಚೆಲ್ ಸ್ಟಾರ್ಕ್ ಕೀ ಆಟಗಾರ. ಈ ಎರಡೂ ತಂಡಗಳಿಗೂ ಕೂಡ ಈ ಇಬ್ಬರೂ ಅತ್ಯಂತ ನಿರ್ಣಾಯಕ ಆಟಗಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಟೆಸ್ಟ್ ಸರಣಿಯು ಅತ್ಯಂತ ತೀವ್ರ ಕುತೂಹಲವನ್ನು ಕೆರಳಿಸಲಿದೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಮಿಚೆಲ್ ಸ್ಟಾರ್ಕ್, “ನಾನು ಮತ್ತೆ ವಿರಾಟ್ ಕೊಹ್ಲಿ ಪರಸ್ಪರ ವಿರೋಧ ತಂಡಗಳ ಮೂಲಕ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಈ ಹಿನ್ನೆಲೆಯಲ್ಲಿ ವಿರಾಟ್ಕೊಹ್ಲಿಗೆ ಬೌಲ್ ಮಾಡುವ ಸವಾಲನ್ನು ನಾನು ಆನಂದಿಸುತ್ತೇನೆ. ನಾನು ಅವರನ್ನು ಒಂದು ಅಥವಾ ಎರಡು ಬಾರಿ ಔಟ್ ಮಾಡಿರಬಹುದು. ಆದರ, ಅವರು ಕೂಡ ನನ್ನ ವಿರುದ್ಧ ರನ್ಗಳನ್ನು ಗಳಿಸಿದ್ದಾರೆ. ಹಾಗಾಗಿ ಅವರೊಂದಿಗಿನ ಸವಾಲನ್ನು ಯಾವಾಗಲೂ ಆನಂದಿಸುತ್ತೇನೆ,” ಎಂದು ಹೇಳಿಕೊಂಡಿದ್ದಾರೆ.