ಬಾಗಲಕೋಟೆ : ಅಲ್ಲೊಬ್ಬ ರೈತ ತರಕಾರಿ ಬೆಳೆಗಳನ್ನ ಬೆಳೆದು ವ್ಯವಸಾಯ ಮಾಡ್ತಿದ್ದಾನೆ. ಆತ ಬೆಳೆಯೋ ಬೆಳೆ ಆರಂಭದಲ್ಲಿ ಉತ್ತಮವಾಗಿ ಬೆಳೆದ್ರು, ಫಸಲು ಕೊಡೋ ಹೊತ್ತಿಗೆ ಯಾವುದಾದ್ರು ರೋಗ ಬಂದು ಹಾಳಾಗ್ತಿತ್ತು. ಜನರ ಕೆಟ್ಟ ದೃಷ್ಟಿಯಿಂದಲೇ ನನ್ನ ಬೆಳೆ ಹಾಳಾಗ್ತಿದೆ ಅಂತ ತಿಳಿದ ರೈತ, ಜನರ ದೃಷ್ಟಿಯಿಂದದ ತನ್ನ ಬೆಳೆ ರಕ್ಷಿಸಿಕೊಳ್ಳಲು ಹೊಸ ಪ್ಲಾನ್ ಮಾಡಿದ್ದಾನೆ. ಆತನ ಪ್ಲಾನ್ ಎಂತಹದ್ದು ಅಂದ್ರೆ, ಬೆಳೆ ನೋಡಬೇಕು ಅಂತ ಜಮೀನಿಗೆ ಹೋದವರ ಕಣ್ಣು ಕೂಡ ಬೆಳೆ ಮೇಲೆ ಬೀಳೋದಿಲ್ಲ. ಅರೆ, ಅದೇನಪ್ಪ ರೈತನ ಪ್ಲಾನ್ ಅಂತೀರಾ ಇಲ್ಲಿದೆ ನೋಡಿ ಡಿಟೇಲ್ಸ್..
ರೈತರೇ ಗಮನಿಸಿ: ಮೊಬೈಲ್ ಮೂಲಕವೇ ನಿಮ್ಮ ಜಮೀನಿನ ಪೋಡಿ ನಕ್ಷೆ ಪಡೆಯಬಹುದು.!
ಹೊಲಕ್ಕೆ ದೃಷ್ಟಿಯಾಗಬಾರದೆಂದು ರೈತನ ಮಾಸ್ಟರ್ ಪ್ಲಾನ್.ಹಿರೊಯಿನ್ ಭಾವಚಿತ್ರದ ಕಟೌಟ್ ಹಾಕಿ ಕೆಟ್ಟ ದೃಷ್ಟಿಯಿಂದ ಕಾವಲು..ಬೆಳೆ ಬದಲಿಗೆ ಹಿರೊಯಿನ್ ಗಳ ಪೊಟೊ ನೋಡಿಕೊಂಡು ಓಡಾಡೋ ಜನ.. ಹೌದು ಸಾಮಾನ್ಯವಾಗಿ ಸಿನಿಮಾ ಹೀರೋ, ಹೀರೋಯಿನ್ ಗಳ ಫೋಟೋಗಳನ್ನ ಅಭಿಮಾನಿಗಳು ತಮ್ಮ ವಾಹನಗಳ ಮೇಲೆ ಹಾಕಿಸೋದು ಕಾಮನ್. ಆದ್ರೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಮಟಗೇರಿ ಗ್ರಾಮದ ಮಹಾಂತೇಶ ಹಾಗೂ ಮಂಜುನಾಥ ತಿಮ್ಮನಾಯ್ಕರ್ ಎಂಬ ಸಹೋದರ ರೈತರು, ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ರಕ್ಷಣೆಗೆ ಹೀರೋಯಿನ್ ಗಳ ಫೋಟೋಗಳನ್ನು ಬಳಸಿಕೊಂಡು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹೌದು, ಮಾಹಾಂತೇಶ ಹಾಗೂ ಮಂಜುನಾಥ ಅವರ ಜಮೀನು ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಹೀಗಾಗಿ ರಸ್ತೆಯಲ್ಲಿ ಓಡಾಡುವ ಜನರ ಕೆಟ್ಟ ದೃಷ್ಟಿ ಬೆಳೆ ಮೇಲೆ ಬಿದ್ದು, ಬೆಳೆ ಸರಿಯಾಗಿ ಬರ್ತಿಲ್ಲ ಅನ್ನೋದು ಈತನ ನಂಬಿಕೆ. ಹೀಗಾಗಿ ಮೆಣಸಿನಕಾಯಿ, ಬದನೆಕಾಯಿ ಬೆಳೆಗೆ ದೃಷ್ಟಿ ತಾಕದಂತೆ ಕನ್ನಡ ಸಿನಿಮಾ ನಾಯಕಿಯರ ಪೊಟೊ ಹಾಕಿದ್ದಾನೆ. ಆ ಮೂಲಕ ಜನರ ಗಮನ ಹೀರೋಯಿನ್ ಗಳ ಫೋಟೋ ಮೇಲೆ ಬೀಳುವಂತೆ ಪ್ಲಾನ್ ಮಾಡಿದ್ದಾರೆ.
ರೈತ ಮಹಾಂತೇಶ್ ಗೆ ಒಟ್ಟು 5 ಎಕರೆ ಜಮೀನಿದೆ. ಮೂರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದಾರೆ. ಎರಡು ಎಕರೆಯಲ್ಲಿ ತರಕಾರಿ ಬೆಳೆಗಳಾದ ಬದನೆಕಾಯಿ, ಮೆಣಸಿನಕಾಯಿ ಬೆಳೆಯುತ್ತಾರೆ. ಆರಂಭದಲ್ಲಿ ಬೆಳೆಗಳು ಚೆನ್ನಾಗಿ ಬೆಳೆದರೂ ಫಸಲು ಕೊಡೋ ಸಮಯಕ್ಕೆ ಸಿಡಿ ಹಾಯ್ದು(ಎಲೆ ಉದುರಿ ಒಣಗಿ) ಹಾಳಾಗ್ತಿತ್ತು. ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು, ವಾಹನ ಸವಾರರ ಕೆಟ್ಟ ದೃಷ್ಟಿಯಿಂದ ಬೆಳೆ ಹಾಳಾಗ್ತಿದೆ ಅಂತ ತಿಳಿದು, ಹೊಲದಲ್ಲಿ ಬಿದಿರು ಮತ್ತು ಮಡಿಕೆಗಳಿಂದ ಮಾಡಿದ ದೃಷ್ಟಿಗೊಂಬೆಗಳನ್ನ ಹಾಕಿ, ಬೆಳೆ ರಕ್ಷಣೆಗೆ ಪ್ರಯೋಗ ಮಾಡಿದ್ದಾರೆ. ಆದ್ರೆ ಅದು ಪ್ರಯೋಜನ ಆಗಿಲ್ಲವಂತೆ. ಹೀಗಾಗಿ ಕೆಟ್ಟ ದೃಷ್ಟಿಯಿಂದ ಬೆಳೆ ರಕ್ಷಿಸೋದು ಹೇಗೆ ಅಂತ ಯೋಚನೆ ಬಂದಾಗ. ಮೊದಲಿಗೆ ರಾಜಕೀಯ ನಾಯಕರ ಭಾವಚಿತ್ರಗಳನ್ನ ಹಾಕಬೇಕು ಅಂದುಕೊಂಡಿದ್ದರಂತೆ. ನಂತರ ರಾಜಕಾರಣಿಗಳ ಫೋಟೋ ಬದಲಿಗೆ ಕನ್ನಡದ ಖ್ಯಾತ ರಾಧಿಕಾ ಪಂಡಿತ್,ರಚಿತಾ ರಾಮ್, ಅಮೂಲ್ಯಾ ಭಾವಚಿತ್ರ ಹಾಕಿದ್ರೆ ಜನರ ದೃಷ್ಟಿ ನಟಿಯರ ಮೇಲೆ ಬಿದ್ದು ಬೆಳೆ ರಕ್ಷಣೆ ಆಗುತ್ತೆ ಅಂತ ಪ್ಲಾನ್ ಮಾಡಿದ್ದಾರೆ.ಕಟೌಟ್ ಗೆ ೧೨೦೦ ಖರ್ಚು ಮಾಡಿ ಹಾಕಿದ್ದಾರೆ.ಮೊದಲು ರೋಗಗಳ ಕಾಟ, ಜನರ ದೃಷ್ಟಿ ತಾಕಿ ಬೆಳೆ ಹಾಳಾಗ್ತಿತ್ತು. ಈಗ ನಾಯಕಿಯರ ಪೊಟೊ ಹಾಕಿದ ನಂತರ ಬೆಳೆ ಹಾಳಾಗಿಲ್ಲ ಅಂತಾರೆ ರೈತರು.
ಒಟ್ಟಿನಲ್ಲಿ ತನ್ನ ಬೆಳೆ ರಕ್ಷಣೆಗಾಗಿ ಚಿತ್ರ ನಟಿಯರನ್ನೇ ಫೋಟೋಗಳ ಮೂಲಕ ತನ್ನ ಹೊಲದಲ್ಲಿ ತಂದು ನಿಲ್ಲಿಸಿರುವ ಈ ರೈತನ ಪ್ಲಾನ್ ಅಚ್ಚರಿ ತಂದಿದೆ.ಜನರ ದೃಷ್ಟಿ ಬೆಳೆಗಳ ಬದಲಿಗೆ ನಟಿಯರ ಫೋಟೋ ಮೇಲೆ ಬೀಳುತ್ತಿದ್ದು ಹೆದ್ದಾರಿ ಪ್ರಯಾಣಿಕರ ಗಮನ ಸೆಳೆಯುತ್ತಿದೆ.
ಮಲ್ಲೇಶ್ ಪರೂತಿ, ಬಾಗಲಕೋಟ.