ಮುಂಬರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಅಗ್ರಮಾನ್ಯ ಬ್ಯಾಟರ್ಗಳಾಗಿದ್ದು, ಅವರ ವಿಕೆಟ್ ಪಡೆಯುವುದೇ ತಮ್ಮ ಮುಖ್ಯ ಗುರಿ ಎಂದು ಆಸ್ಟ್ರೇಲಿಯಾದ ಅನುಭವಿ ಆಫ್ ಸ್ಪಿನ್ನರ್ ನೇಥನ್ ಲಯಾನ್ ಹೇಳಿಕೊಂಡಿದ್ದಾರೆ.
ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಮೂರನೇ ಆವೃತ್ತಿಯ ಭಾಗವಾಗಿ ಈ ಸರಣಿ ನಡೆಯಲಿದೆ. ಜೊತೆಗೆ 4 ದಶಕಗಳ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ಆಯೋಜನೆ ಆಗುತ್ತಿದ್ದು ಬಹಳಾ ಕುತೂಹಲ ಕೆರಳುವಂತೆ ಮಾಡಿದೆ. ಸರಣಿಯ ರೋಚಕತೆ ಹೆಚ್ಚಿಸಲು ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಇದು ಪ್ರತಿಷ್ಠೆಯ ಸರಣಿ ಕೂಡ ಏಕೆಂದರೆ, ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಭಾರತ ತಂಡ ಟೆಸ್ಟ್ ಕ್ರಿಕೆಟ್ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮೆರೆದಿದೆ.
ವರಿನಲ್ಲಿ ಟೀಮ್ ಇಂಡಿಯಾ ಎದುರು ಅನುಭವಿಸಿದ ಬ್ಯಾಕ್ ಟು ಬ್ಯಾಕ್ ಸರಣಿ ಸೋಲು ಆಸ್ಟ್ರೇಲಿಯಾ ತಂಡಕ್ಕೆ ನುಂಗಲಾರದ ತುತ್ತಾಗಿದೆ. ಈ ಸೋಲಿನ ಸರಪಳಿ ಕಳಚಲು ಕಾಂಗರೂ ಪಡೆ ಈ ಬಾರಿ ಶತಾಯಗತಾಯ ಪ್ರಯತ್ನ ನಡೆಸಲಿದೆ. ಆದರೆ, ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಈ ಬಾರಿಯೂ ಸರಣಿ ಗೆಲ್ಲುವ ಹಾಟ್ ಫೇವರಿಟ್. ಏಕೆಂದರೆ ಭಾರತ ತಂಡದಲ್ಲಿ ಮ್ಯಾಚ್ ವಿನ್ನರ್ಗಳ ದಂಡೇ ಇದೆ.
“ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಟೀಮ್ ಇಂಡಿಯಾದ ಟಾಪ್ 3 ಬ್ಯಾಟರ್ಗಳಾಗಿದ್ದಾರೆ. ಅವರ ವಿಕೆಟ್ ಬಹುದೊಡ್ಡದು. ಜೊತೆಗೆ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ರವೀಂದ್ರ ಜಡೇಜಾ ಅಂತಹ ಅಪಾಯಕಾರಿ ಬ್ಯಾಟರ್ಗಳು ಕೂಡ ತಂಡದಲ್ಲಿ ಇದ್ದಾರೆ ಎಂಬುದು ನಮಗೆ ತಿಳಿದಿದೆ. ಭಾರತ ತಂಡದ ಬ್ಯಾಟಿಂಗ್ ಲೈನ್ ಅಪ್ ಅತ್ಯಂತ ಬಲಿಷ್ಠವಾಗಿದೆ. ಹೀಗಾಗಿ ಅವರ ವಿಕೆಟ್ ಪಡೆಯುವುದು ಅತ್ಯಂತ ಸವಾಲಿನ ಸಂಗತಿ. ನಾನು ಮೊದಲೇ ಹೇಳಿದಂತೆ ಈ ತಂಡದ ಬ್ಯಾಟಿಂಗ್ ಎದುರು ನಮ್ಮ ಬೌಲಿಂಗ್ ವಿಭಾಗ ದೀರ್ಘ ಸಮಯದವರೆಗೆ ಶ್ರೇಷ್ಠ ದಾಳಿ ಸಂಘಟಿಸಬೇಕಾಗುತ್ತದೆ. ಭಾರತೀಯ ಬ್ಯಾಟರ್ಗಳ ಭದ್ರಕೋಟೆ ಮುರಿಯುವ ವಿಶ್ವಾಸ ನಮ್ಮಲ್ಲಿದೆ,” ಎಂದು ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಆಫ್ ಸ್ಪಿನ್ನರ್ ನೇಥನ್ ಲಯಾನ್ ಹೇಳಿಕೊಂಡಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಆಸ್ಟ್ರೇಲಿಯಾ ನೆಲದಲ್ಲಿ ಹೆಚ್ಚು ಟೆಸ್ಟ್ ಆಡುವ ಅವಕಾಶ ಸಿಕ್ಕಿಲ್ಲ. ಕಾಂಗರೂ ನಾಡಲ್ಲಿ ಈವರೆಗೆ ಆಡಿದ 7 ಪಂದ್ಯಗಳಲ್ಲಿ 408 ರನ್ಗಳನ್ನು ಮಾತ್ರ ಗಳಿಸಿದ್ದು, ಶತಕ ಬಾರಿಸುವುದು ಬಾಕಿ ಇದೆ. ಹೀಗಾಗಿ ಈ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಸದ್ಬಳಕೆ ಮಾಡಿ ದೊಡ್ಡ ಸ್ಕೋರ್ ಮಾಡಲು ಹಿಟ್ಮ್ಯಾನ್ ಎದುರು ನೋಡುತ್ತಿದ್ದಾರೆ.