ಚಾಮರಾಜನಗರ:- ಬಹುಮತವಿದ್ದರೂ ಕೊಳ್ಳೇಗಾಲ ನಗರಸಭೆ ಹಾಗೂ ಗುಂಡ್ಲುಪೇಟೆ ಪುರಸಭೆಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ, ಚಾಮರಾಜನಗರ ನಗರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಸೇಡು ತೀರಿಸಿಕೊಂಡಿದ್ದು
ಕಮಲ ಕಿಲಿಕಿಲ ಎಂದು ಗೆಲುವಿನ ನಗೆ ಬೀರಿದ್ರೆ. ಇತ್ತ ಸಂಸದ ಹಾಗೂ ಶಾಸಕರನ್ನು ಗೆಲ್ಲಿಸಿಕೊಂಡಿರುವ ಕಾಂಗ್ರೆಸ್ ಪಕ್ಷವು ನಗರಸಭೆಯ ಅಧಿಕಾರ ಹಿಡಿಯಲು ವಿಫಲವಾಗಿ ಕೈ ಪಕ್ಷವು ಸತತ ಎರಡನೇ ಬಾರೀ ಸೋತು ಸುಣ್ಣಗಾಗಿ ವಿಲವಿಲನೆ ಒದ್ದಾಡುವಂತಾಗಿದೆ….!
ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕು ಎಂದು ಪಣತೊಟ್ಟು ಅಖಾಡಕ್ಕಿಳಿದಿದ್ದ ಕಾಂಗ್ರೆಸ್ ಸಂಸದ ಸುನೀಲ್ ಬೋಸ್ ಹಾಗೂ ಚಾಮರಾಜನಗರ ಶಾಸಕ. ಮಾಜಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದ ಬಿಜೆಪಿ ನಗರಸಭೆಯಲ್ಲಿ ಮತ್ತೊಮ್ಮೆ ಕಮಲ ಅರಳುವಂತೆ ಮಾಡಿದೆ.
ಕಾಂಗ್ರೆಸ್ ಹಾಗೂ ಎಸ್ಡಿಪಿಐ ಮೈತ್ರಿಕೂಟ ಹೆಣೆದ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಸೋಮವಾರದಂದು ಚಾಮರಾಜನಗರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ 29ನೇ ವಾರ್ಡ್ನ ರಾಮಸಮುದ್ರದ ಸುರೇಶ್ ಅಧ್ಯಕ್ಷರಾಗಿ, 22ನೇ ವಾರ್ಡ್ ಸದಸ್ಯೆ ಮಮತಾ ಬಾಲಸುಬ್ರಹ್ಮಣ್ಯ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಇಬ್ಬರೂ ತಲಾ 15 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು.
ಕಾಂಗ್ರೆಸ್ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 31ನೇ ವಾರ್ಡ್ ಆರ್.ಎಂ.ರಾಜಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 13ನೇ ವಾರ್ಡ್ ಸದಸ್ಯ ಅಬ್ರಾರ್ ಅಹಮದ್ ತಲಾ 14 ಮತಗಳನ್ನು ಪಡೆದು ಒಂದು ಮತದಿಂದ ಪರಾಭವಗೊಂಡರು.
‘ಕೈ’ ಕೊಟ್ಟ ಮೂವರು ಸದಸ್ಯರು: ಕಾಂಗ್ರೆಸ್ನಿಂದ ಗೆದ್ದಿದ್ದ 1ನೇ ವಾರ್ಡ್ (ಸೋಮವಾರಪೇಟೆ) ಸದಸ್ಯೆ ಎಸ್.ನೀಲಮ್ಮ, 15ನೇ ವಾರ್ಡ್ (ಬಾಬು ಜಗಜೀವನರಾಂ ಬಡಾವಣೆ) ಸದಸ್ಯ ಆರ್.ಪಿ.ನಂಜುಡಸ್ವಾಮಿ, 24ನೇ ವಾರ್ಡ್ (ಜಾಲಹಳ್ಳಿ ಹುಂಡಿ) ಸದಸ್ಯೆ ಭಾಗ್ಯಮ್ಮ ಚುನಾವಣೆಗೆ ಗೈರು
ಹಾಜರಾಗಿದ್ದರಿಂದ ಹಾಗೂ 16 ನೇ ಪಾರ್ಡ್ (ರೈಲ್ವೆ ಬಡಾವಣೆ) ಸದಸ್ಯ ಬಿ.ಎಸ್. ಚಂದ್ರಕಲಾ ಅಡ್ಡ ಮತದಾನ ಮಾಡಿದ್ದರಿಂದ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಬೇಕಾಯಿತು.
ಹಾಗಾಗಿ ಸ್ವಪಕ್ಷೀಯರೇ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾದರು.
ಕೈ ಎತ್ತುವ ಮೂಲಕ ಮತದಾನ ಮಾಡಿದ ಸದಸ್ಯರು
* 31 ಸದಸ್ಯರ ಬಲ: 27 ಸದಸ್ಯರಿಂದ ಮತದಾನ
* ಒಂದು ಮತದಿಂದ ಸೋಲನುಭವಿಸಿದ ಕಾಂಗ್ರೆಸ್
ತಲೆಕೆಳಗಾದ ಲೆಕ್ಕಾಚಾರ:
ಕಾಂಗ್ರೆಸ್ನ 8, ಎಸ್ಡಿಪಿಐ 6, ಓರ್ವ ಪಕ್ಷೇತರ ಸದಸ್ಯ, ಸಂಸದರು, ಶಾಸಕರ ಮತಗಳೊಂದಿಗೆ ಗೆಲುವಿಗೆ ಸರಳ ಬಹುಮತ ಹೊಂದಿದ್ದ ಕಾಂಗ್ರೆಸ್ ಲೆಕ್ಕಾಚಾರವನ್ನು ಪಕ್ಷದ ಸದಸ್ಯರೇ ತಲೆಕೆಳಗೆ ಮಾಡಿದರು. 17ರ ಮ್ಯಾಜಿಕ್ ನಂಬರ್ ಮುಟ್ಟಲು ಹೊರಟ ಕಾಂಗ್ರೆಸ್ 15 ಮತಗಳನಷ್ಟೆ ಶಕ್ತವಾಯ್ತು. ಈ ಮೂಲಕ ಬಿಜೆಪಿ ಸತತ ಎರಡನೇ ಬಾರಿಗೆ ನಗರಸಭೆಯ ಚುಕ್ಕಾಣಿ ಹಿಡಯಿತು.
ಚುನಾವಣೆಗೆ ಗೈರಾದವರು
ಎಸ್.ನೀಲಮ್ಮ
(1ನೇ ವಾರ್ಡ್)
ಆರ್.ಪಿ.ನಂಜುಡಸ್ವಾಮಿ
(15ನೇವಾರ್ಡ್)
ಭಾಗ್ಯಮ್ಮ
(24ನೇ ವಾರ್ಡ್)
ಅಡ್ಡ ಮತದಾನ ಮಾಡಿದವರು
* ಬಿ.ಎಸ್.ಚಂದ್ರಕಲಾ(16ನೇ ವಾರ್ಡ್)
* ಮಹದೇವಯ್ಯ (30ನೇ ವಾರ್ಡ್)
ಸಂಭ್ರಮಾಚರಣೆ: బిಜೆಪಿ ಗೆಲುವು
ಬಿಜೆಪಿ ಗೆಲುವು ಘೋಷಣೆಯಾಗುತ್ತಿದ್ದಂತೆ ಹೊರಗೆ ನಿಂತಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸಿದರು. ಪರಸ್ಪರ ಸಿಹಿ ತಿನಿಸಿ ಗೆಲುವಿನ ಖುಷಿ ಅನುಭವಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷೆಗೆ ಹೂವಿನ ಮಾಲೆ ಹಾಕಿ ಮೆರವಣಿಗೆ ನಡೆಸಿದರು.