ಇಂಫಾಲ: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿಂದು ಮುಂಜಾನೆ ನಡೆದ ಹಿಂಸಾಚಾರದಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಶಸ್ತ್ರಸಜ್ಜಿತ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಾಲ್ವರು ಸಾವಿಗೀಡಾಗಿದ್ದಾರೆ. ಮತ್ತೋರ್ವ ವ್ಯಕ್ತಿಯನ್ನು ಮನೆಗೆ ನುಗ್ಗಿ ಮಲಗಿದ್ದಾಗಲೇ ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ ಕೆಲವೆಡೆ ದುಷ್ಕರ್ಮಿಗಳು ಕೆಲ ಮನೆಗಳಿಗೆ ಬೆಂಕಿ ಹಚ್ಚಿದ ಮೇಲೆ ಹಿಂಸಾಚಾರ ಆರಂಭಗೊಂಡಿತ್ತು.
ಆಗಸ್ಟ್ 1 ರಂದು ಪಕ್ಕದ ಅಸ್ಸಾಂನ ಕ್ಯಾಚಾರ್ನಲ್ಲಿ ಸಿಆರ್ಪಿಎಫ್ ಯೋಧರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಣಿಪುರವನ್ನು ಸಹಜ ಸ್ಥಿತಿಗೆ ತರಲು ಮೈತೇಯಿ ಮತ್ತು ಹ್ಮಾರ್ ಸಮುದಾಯಗಳ ಪ್ರತಿನಿಧಿಗಳು ಒಪ್ಪಂದಕ್ಕೆ ಬಂದಿದ್ದರು. ಇದಾದ ಬಳಿಕ ಕೆಲವೆಡೆ ಹಿಂಸಾಚಾರ ಆರಂಭಗೊಂಡಿತ್ತು.
ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ್ ಕಣಿವೆ ಮೂಲದ ಮೈತೇಯಿ ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಜೋ ಗುಂಪುಗಳ ನಡುವೆ ಹಿಂಸಾಚಾರ ನಡೆಯುತ್ತಿದೆ. ಈ ಜನಾಂಗೀಯ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.