ಗಣೇಶನ ವಿಗ್ರಹದಲ್ಲಿ ಎಡಮುರಿ ಗಣೇಶ ಮತ್ತು ಬಲಮುರಿ ಗಣೇಶ ಎಂಬ ಎರಡು ಬಗೆಯ ಸೊಂಡಿಲನ್ನು ಹೊಂದಿರುವ ಗಣೇಶನ ಪ್ರತಿಮೆಗಳನ್ನು ನೋಡಿರುತ್ತೀರಿ. ಈ ಎರಡು ತರಹದ ವಿಗ್ರಹಗಳಲ್ಲಿ ಯಾವುದು ವಿಶೇಷ ಮತ್ತು ಅವುಗಳಿಗಿರುವ ವ್ಯತ್ಯಾಸಗಳೇನು ಎಂಬುದನ್ನು ಇಲ್ಲಿ ತಿಳಿಸಿಕೊಡುತ್ತಿದ್ದೇವೆ.
ಬಲಗಡೆ ಸೊಂಡಿಲು ತಿರುಗಿರುವ ಗಣೇಶನ ವಿಗ್ರಹ ಕಾಣಸಿಗುವುದು ಅಪರೂಪ. ಹೆಚ್ಚಾಗಿ ಎಡಗಡೆ ಸೊಂಡಿಲು ಇರುವ ಗಣಪನನ್ನೇ ಪೂಜಿಸುತ್ತಾರೆ. ಇವೆಲ್ಲದ್ದಕ್ಕೂ ಅದರದ್ದೇ ಕಾರಣಗಳು ಇವೆ. ಬಲಮುರಿ ಗಣಪನ ಮೂರ್ತಿ ತಯಾರಿಸಿದರೆ ಒಳ್ಳೆಯದಲ್ಲ ಎಂಬ ನಂಬಿಕೆಯಿಂದ ಬಲಮುರಿ ಗಣೇಶನ ಮೂರ್ತಿ ತಯಾರಿಸುವವರ ಸಂಖ್ಯೆ ತುಂಬಾ ಕಡಿಮೆ.
ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವಾಗ ಗಣೇಶನ ಸೊಂಡಿಲು ಯಾವ ಕಡೆ ಇದೆಯೆಂದು ನಾವು ಗಮನಿಸುವುದಿಲ್ಲ. ಬಹುತೇಕ ಗಣೇಶನ ಮೂರ್ತಿಗಳ ಸೊಂಡಿಲು ಎಡಗಡೆಗೆ ಬಾಗಿರುತ್ತದೆ. ಇದನ್ನು ಎಡಮುರಿ ಎಂದು, ಬಲಗಡೆ ಸೊಂಡಿಲು ಬಾಗಿದ್ದರೆ ಬಲಮುರಿ ಎಂದು, ನೇರವಾಗಿ ಸೊಂಡಿಲು ಡೊಂಕಾಗಿದ್ದರೆ ಅದನ್ನು ಊರ್ದ್ವಮುರಿ ಎಂದು ಕರೆಯುತ್ತಾರೆ.
ಬಲಮುರಿ ಎಂದರೆ ದಕ್ಷಿಣಾಭಿಮುಖ. ದಕ್ಷಿಣ ದಿಕ್ಕು ಯಮನ ದಿಕ್ಕು. ಗಣೇಶನ ಸೊಂಡಿಲು ಬಲಮುರಿಗೆ ಇದ್ದರೆ ಯಮನನ್ನು ಎದುರಿಸುವ ಶಕ್ತಿ ಹೊಂದಿರುತ್ತಾರೆ. ಅವರು ಸಾಕಷ್ಟು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಲ್ಲರು. ಬಲಮುರಿಯ ಗಣೇಶ ಮೂರ್ತಿ ಪೂಜೆಯ ಸಂದರ್ಭದಲ್ಲಿ ಏನಾದರೂ ತೊಂದರೆಯಾದರೆ ಕೇಡು. ಅದಕ್ಕಾಗಿ ಬಲಮುರಿ ಗಣೇಶನನ್ನು ಪೂಜಿಸುವಾಗ ಶ್ರದ್ಧೆಯಿಂದ ಇರಬೇಕು. ಇದಕ್ಕಾಗಿಯೇ ಇದಕ್ಕೆ ಜಾಗೃತ ಗಣೇಶ ಎನ್ನುತ್ತಾರೆ. ಸನಾತನ ಗ್ರಂಥಗಳಲ್ಲಿ ಇದರ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ.
ಎಡಮುರಿ ಗಣೇಶ ವಾಮಮುಖಿ. ವಾಮಮುಖಿಯು ಉತ್ತರ ದಿಕ್ಕು. ಉತ್ತರ ದಿಕ್ಕು ಆಧ್ಯಾತ್ಮತೆಗೆ ಶಾಂತವಾದ ದಿಕ್ಕು ಎಂದು ಹೇಳುತ್ತಾರೆ. ಈ ಕಾರಣಕ್ಕೆ ಗಣೇಶನ ಸೊಂಡಿಲು ಎಡಮುರಿಯಾಗಿರುತ್ತದೆ ಎನ್ನುತ್ತಾರೆ. ಬಲಗಡೆ ಸೊಂಡಿಲು ಇರುವ ಗಣೇಶನ ಮೂರ್ತಿಗಳನ್ನು ಕಾಣುವುದು ತುಂಬಾ ಕಡಿಮೆ. ಬಹುತೇಕರು ಎಡಭಾಗಕ್ಕೆ ಸೊಂಡಿಲು ಇರುವ ಗಣೇಶ ಮೂರ್ತಿಗಳನ್ನೇ ತಯಾರಿಸುತ್ತಾರೆ.
ಬಲಮುರಿ ಗಣೇಶನ ಮೂರ್ತಿಗಳನ್ನು ತಯಾರು ಮಾಡಿದರೆ ತಯಾರು ಮಾಡಿದವರಿಗೆ ತೊಡಕಾಗುತ್ತದೆ. ಅದನ್ನು ಪ್ರತಿಷ್ಠಾಪಿಸಿದವರಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಬಹುತೇಕ ಗಣೇಶಮೂರ್ತಿ ತಯಾರಕರು ಬಲಮುರಿ ಗಣೇಶ ಮೂರ್ತಿಗಳನ್ನು ಎಷ್ಟೇ ಹಣ ಕೊಡುತ್ತೇವೆ ಎಂದರೂ ತಯಾರಿಸುವುದಕ್ಕೆ ಸಿದ್ಧರಿರುವುದಿಲ್ಲ.
ಈ ನಂಬಿಕೆಯು ಹಿಂದಿನ ಕಾಲದಿಂದಲೂ ಬಂದಿದ್ದು, ಈಗಲೂ ಮುಂದುವರಿಯುತ್ತಿದೆ. ಆದ್ದರಿಂದ ಗಣೇಶನ ಮೂರ್ತಿ ತಯಾರಿಸುವ ಕಲಾವಿದರು ಈ ನಂಬಿಕೆಯನ್ನು ಮುಂದುವರಿಸುತ್ತಿದ್ದಾರೆ. ಈಗಿನ ಕಾಲದಲ್ಲೂ ಪುರಾತನ ನಂಬಿಕೆಗಳು ಹಾಗೆಯೇ ಮುಂದುವರೆಯುತ್ತಿದೆ.