ಶಿಮ್ಲಾ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿಮಾಚಲ ಪ್ರದೇಶ ಈಗ ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸಿದೆ.
ಅಸೆಂಬ್ಲಿ ಸಮಿತಿಯ ವರದಿಯ ಶಿಫಾರಸುಗಳನ್ನು ಅನುಸರಿಸಿ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವ ಮಹತ್ವದ ನಿರ್ಣಯವನ್ನು ಹಿಮಾಚಲ ಪ್ರದೇಶ ವಿಧಾನಸಭೆ ಅಂಗೀಕರಿಸಿದೆ.
ಔಷಧೀಯ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಗಾಂಜಾ ಕೃಷಿ ಅಗತ್ಯವಾಗಿದೆ. ಅಲ್ಲದೇ ರಾಜ್ಯಕ್ಕೆ ಆರ್ಥಿಕತೆಯನ್ನು ಹೆಚ್ಚಿಸಲು ಇದು ಅನುಕೂಲವಾಗಲಿದೆ ಎಂದು ಸಮಿತಿ ಪ್ರಸ್ತಾಪಿಸಿದ ಸರ್ಕಾರ ಮಸೂದೆಯನ್ನು ಅಂಗೀಕರಿಸಿದೆ.
ಕಂದಾಯ ಸಚಿವ ಮತ್ತು ಅಸೆಂಬ್ಲಿ ಸಮಿತಿ ಅಧ್ಯಕ್ಷ ಜಗತ್ ಸಿಂಗ್ ನೇಗಿ ಅವರು ಗಾಂಜಾ ಕೃಷಿಯ ಸಂಭಾವ್ಯ ಪ್ರಯೋಜನಗಳ ಕುರಿತು ವಿವರವಾಗಿ ವಿಧಾನಸಭೆಯಲ್ಲಿ ಮಾತನಾಡಿದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ಬೆಂಬಲದೊಂದಿಗೆ ನಿಯಮ 130ರ ಅಡಿಯಲ್ಲಿ ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಬಳಿಕ ವಿಷಯದ ಅಧ್ಯಯನಕ್ಕೆ ಒಂದು ಸಮಿತಿಯನ್ನು ರಚಿಸಲಾಯಿತು ಎಂದರು.
ಸಮಿತಿಯು ಹಿಮಾಚಲ ಪ್ರದೇಶದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಗಾಂಜಾ ಕೃಷಿಯನ್ನು ಔಷಧೀಯ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಹೇಗೆ ಬಳಸಬಹುದು ಎಂಬುದರ ಕುರಿತು ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿತು. ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಮಧ್ಯಪ್ರದೇಶದಲ್ಲಿ ಯಶಸ್ವಿ ಮಾದರಿಗಳನ್ನು ಸಹ ಅಧ್ಯಯನ ಮಾಡಿದ್ದೇವೆ. ಎಲ್ಲೆಡೆ ಕಾನೂನುಬದ್ಧಗೊಳಿಸುವ ಪರವಾಗಿ ಅಭಿಮತ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಗಾಂಜಾ ಸಸ್ಯಕ್ಕೆ ಹೆಚ್ಚು ನೀರಿನ ಅಗತ್ಯವಿಲ್ಲ, ವ್ಯಾಪಕವಾದ ಭೂಮಿ ಅಗತ್ಯವಿಲ್ಲ, ಪ್ರಾಣಿಗಳ ಹಾನಿಗೆ ನಿರೋಧಕವಾಗಿದೆ ಮತ್ತು ಹೆಚ್ಚಾಗಿ ರೋಗಗಳಿಂದ ಮುಕ್ತವಾಗಿದೆ ಎಂದು ಅವರು ವಿವರಿಸಿದರು. ಇದು ಕೈಗಾರಿಕಾ ಮತ್ತು ಔಷಧೀಯ ಬಳಕೆಗೆ ಹೆಚ್ಚಿನ ಸಾಮಥ್ರ್ಯವನ್ನು ಹೊಂದಿದೆ. ಎನ್ಡಿಪಿಎಸ್ ಕಾಯಿದೆಯ ಅಡಿಯಲ್ಲಿ ಅಫೀಮು ಕೃಷಿಯಂತೆಯೇ ಇದಕ್ಕೆ ಅವಕಾಶ ಕೊಡಬಹುದು. ಅಲ್ಲದೇ ದುರುಪಯೋಗವನ್ನು ತಡೆಗಟ್ಟಲು ಕಾನೂನು ಜಾರಿಗೆ ತರುತ್ತೇವೆ ಎಂದು ಅವರು ತಿಳಿಸಿದ್ದಾರೆ.