ಹತ್ರಾಸ್:-ಮಿನಿ ಟ್ರಕ್ಗೆ ರಸ್ತೆಮಾರ್ಗದ ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಜರುಗಿದೆ.
ರಾಷ್ಟ್ರೀಯ ಹೆದ್ದಾರಿ 93ರಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರು ಹತ್ರಾಸ್ನಿಂದ ಆಗ್ರಾಕ್ಕೆ ತೆರಳುತ್ತಿದ್ದರು. ಮಿನಿ ಲಾರಿಯಲ್ಲಿದ್ದವರು ಊಟ ಮುಗಿಸಿ ಸೇವಾಲ ಗ್ರಾಮಕ್ಕೆ ಹಿಂತಿರುಗುತ್ತಿದ್ದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪಘಾತದ ಬಗ್ಗೆ ತಿಳಿದು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ನಿಪುನ್ ಅಗರ್ವಾಲ್ ಅವರು, “ಆಗ್ರಾ-ಅಲಿಘರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಅನ್ನು ಓವರ್ಟೇಕ್ ಮಾಡಲು ಪ್ರಯತ್ನಿಸುವಾಗ ಬಸ್ ವ್ಯಾನ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ” ಎಂದು ಹೇಳಿದ್ದಾರೆ.
ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮಾಹಿತಿಯ ಪ್ರಕಾರ, ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮಾಹಿತಿ ಪಡೆದ ಕೂಡಲೇ ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ತಲುಪಿದರು. ಮೃತರನ್ನು ಮತ್ತು ಅಪಘಾತಕ್ಕೆ ಕಾರಣರಾದವರನ್ನು ಗುರುತಿಸುತ್ತಿದ್ದೇವೆ ಎಂದು ಹತ್ರಾಸ್ ಎಸ್ಪಿ ನಿಪುನ್ ಅಗರ್ವಾಲ್ ಹೇಳಿದ್ದಾರೆ