ಭಾರತ ತಂಡದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಅವರನ್ನು ಮುಕ್ತಕಂಠದಿಂದ ಗುಣಗಾಣ ಮಾಡಿದ ಯಂಗ್ ಓಪನರ್ ಯಶಸ್ವಿ ಜೈಸ್ವಾಲ್, ಅವರು ಮಾಡಿದ್ದ ಸಹಾಯವೊಂದನ್ನು ಬಹಿರಂಗಪಡಿಸಿದ್ದಾರೆ. ಕ್ರಿಕೆಟ್ನಲ್ಲಿ ಭಯಮುಕ್ತವಾಗಿ ಬ್ಯಾಟ್ ಮಾಡಲು ಗೌತಮ್ ಗಂಭೀರ್ ನನಗೆ ನೆರವು ನೀಡಿದ್ದಾರೆಂಬ ಅಂಶವನ್ನು ಯಶಸ್ವಿ ಜೈಸ್ವಾಲ್ ತಿಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ದೇಶಿ ಕ್ರಿಕೆಟ್ನಲ್ಲಿನ ತಮ್ಮ ಭಯಮುಕ್ತ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಯಶಸ್ವಿ ಜೈಸ್ವಾಲ್, ತಾವು ಆಡಿದ್ದ ಎಲ್ಲಾ ಟೂರ್ನಿಗಳಲ್ಲಿಯೂ ರನ್ ಹೊಳೆಯನ್ನು ಹರಿಸಿದ್ದರು. ಇದರ ಫಲವಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಅದರಂತೆ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸ್ಪೋಟಕ ಆರಂಭವನ್ನು ಪಡೆದಿದ್ದಾರೆ. ಟಿ20, ಒಡಿಐ ಹಾಗೂ ಟೆಸ್ಟ್ ಯಾವುದೇ ಸ್ವರೂಪವಾದರೂ ಅವರು ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ರನ್ಗಳ ಶಿಖರವನ್ನು ಕಟ್ಟಿದ್ದಾರೆ.
ಇದೀಗ ಸೆಪ್ಟಂಬರ್ 19 ರಂದು ಬಾಂಗ್ಲಾದೇಶ ವಿರುದ್ದ ಆರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಯಶಸ್ವಿ ಜೈಸ್ವಾಲ್ ಸಜ್ಜಾಗುತ್ತಿದ್ದಾರೆ. ಅವರು ಇದೀಗ ನಡೆಯುತ್ತಿರುವ 2025ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇತ್ತೀಚೆಗೆ ಪಿಟಿಐ ಜೊತೆ ಮಾತನಾಡಿದ್ದ ಅವರು ಹಲವು ಪ್ರಮುಖ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಗೌತಮ್ ಗಂಭೀರ್ ಅವರು ಮಾಡಿದ್ದ ಸಹಾಯವನ್ನು ಸ್ಮರಿಸಿಕೊಂಡಿದ್ದಾರೆ.
“ಶ್ರೀಲಂಕಾ ಸರಣಿಯ ವೇಳೆ ನಾನು ಗೌತಮ್ ಗಂಭೀರ್ ಅವರ ಜೊತೆ ಮಾತನಾಡಿದ್ದೆ. ನೀವು ಮೈದಾನಕ್ಕೆ ಹೋಗಿ, ಮುಕ್ತವಾಗಿ ಆಡಿ ಆಟವನ್ನು ಆನಂದಿಸಿ, ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಅವರು ನಮಗೆ ಹೇಳಿದ್ದರು. ಭಯಮುಕ್ತವಾಗಿ ಆಡಲು ನಮಗೆ ಅವರ ಮಾತು ಸಾಕಷ್ಟು ವಿಶ್ವಾಸವನ್ನು ಹೆಚ್ಚಿಸಿದೆ,” ಎಂದು ಯಶಸ್ವಿ ಜೈಸ್ವಾಲ್ ಪಿಟಿಐಗೆ ತಿಳಿಸಿದ್ದಾರೆ.