ಗಣೇಶ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಎಲ್ಲರಿಗೂ ಈ ಗಣೇಶ ಹಬ್ಬ ಅಂದ್ರೆ ಎಲ್ಲಿಲ್ಲದ ಸಡಗರ ಸಂಭ್ರಮ, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ವಿವಿಧ ಬಗೆಯ ಗಣೇಶ ಕೂರಿಸಿ ಹಲವು ಬಗೆಯ ಹೂಗಳಿಂದ ಅಲಂಕಾರ ಮಾಡುತ್ತಾರೆ.
ಡಾ.ಬ್ರೋ ಕಂಪನಿಯಲ್ಲಿದೆ ಕೆಲಸ: ಯಾವ್ಯಾವ ಹುದ್ದೆಗಳು ಖಾಲಿ ಇವೆ..? ಇಲ್ಲಿದೆ ಡೀಟೈಲ್ಸ್!
ಆದರೆ ಅಲಂಕಾರ ಪ್ರಿಯ, ಭಕ್ತ ಪ್ರಿಯ ಸಿಂಗಾರ ಪ್ರಿಯರ ಮೂಷಿಕವಾಹನನಿಗೆ ಪವಿತ್ರ ತುಳಸಿ ಮಾತ್ರ ಅರ್ಪಿಸುವುದಿಲ್ಲ.
ತುಳಸಿ ದಳ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಗಿಡವೆಂದೇ ನಂಬುತ್ತಾರೆ. ತುಳಸಿ ಇಲ್ಲದ ಮನೆಯ ಮುಂಬಾಗಿಲು ನಮಗೆ ಭಾರತದಲ್ಲಿ ಸಿಗುವುದೇ ಅಪರೂಪ. ತುಳಸಿಯನ್ನು ಲಕ್ಷ್ಮೀಯ ಇನ್ನೊಂದು ಪ್ರತಿರೂಪ ಅಂತಲೇ ಕರೆಯುತ್ತಾರೆ. ಔಷಧಿ ಗುಣಗಳಿಂದ ಮಾತ್ರವಲ್ಲ. ಹಲವು ರೀತಿಯಲ್ಲಿ ತುಳಸಿ ನಮಗೆ ಪವಿತ್ರ ದಳ. ಸಂಧ್ಯಾವಂದನೆಯಿಂದ ಹಿಡಿದು, ನೈವೆದ್ಯದವರೆಗೂ ತುಳಸಿ ಪ್ರಾಮುಖ್ಯತೆಯನ್ನು ನಮ್ಮ ಪುರಾಣಗಳು ಕಟ್ಟಿಕೊಟ್ಟಿವೆ. ಆದ್ರೆ ಗಣೇಶನಿಗೆ ಮಾತ್ರ ಈ ತುಳಸಿ ದಳವನ್ನು ಏರಿಸುವಂತಿಲ್ಲ. ಅದಕ್ಕೆ ಕಾರಣ ತುಳಸಿ ಹಾಗೂ ಗಣಪ ಒಬ್ಬರಿಗೊಬ್ಬರು ಕೊಟ್ಟುಕೊಂಡಿರುವ ಶಾಪ.
ಪುರಾಣಗಳು ಹೇಳುವ ಪ್ರಕಾರ ತುಳಸಿ ಸದಾ ವಿಷ್ಣು ಪ್ರಿಯೆ ಅವನಿಗಾಗಿಯೇ ಹಂಬಲಿಸಿದವಳು. ಹರನಿಗಾಗಿ ಗಿರಿಜೆ ಹಂಬಲಿಸಿದಂತೆ, ತಪಸ್ಸು ಮಾಡಿದಂತೆ ಹರಿಗಾಗಿ ತುಳಸಿ ಹಂಬಲಿಸಿ, ತಪಿಸಿದವಳು. ಆದರೆ ಒಂದೇ ಒಂದು ಬಾರಿ ಮನದ ಸಮೋತಲನ ಕಳೆದುಕೊಂಡು ಗಣಪನ ಮೇಲೆ ಮೋಹ ಮೂಡುತ್ತದೆ ತುಳಸಿಗೆ. ತಪಸ್ಸಿನಲ್ಲಿ ನಿರತನಾಗಿದ್ದ ಗಣೇಶನನ್ನು ಕಂಡು ಮೋಹಪರವಶಳಾದ ತುಳಸಿ, ನಾನು ನಿನ್ನನ್ನು ಮದುವೆಯಾಗಬೇಕು, ನಾನು ನಿನಗೆ ಒಲಿದಿದ್ದೇನೆ. ನನ್ನ ಪ್ರೀತಿಯನ್ನು ನಿರಾಕರಿಸಬೇಡ ಆರ್ಯ ಎಂದು ಬೇಡುತ್ತಾಳೆ.
ಗಣೇಶ ಸದಾ ತಪಸ್ಸಿನಲ್ಲಿ ನಿರತನಾಗಿರುವ ಹರಪುತ್ರ ಆಕೆಯ ಪ್ರೇಮ ಪ್ರಸ್ತಾಪವನ್ನು ನಯವಾಗಿಯೇ ತಿರಸ್ಕರಿಸುತ್ತಾನೆ. ದೇವಿ, ನಾನು ಸಂಸಾರವೆಂಬ ಸಾಗರದಿಂದ ಮುಕ್ತನಾಗಲು ಹಂಬಲಿಸಿದವನು. ಸದಾ ಜಪತಪಗಳೇ ನನ್ನ ಉತ್ಥಾನದ ಮಾರ್ಗ ಹೀಗಾಗಿ ನಿನ್ನನ್ನು ನಾನು ವರಿಸಲಾರೆ ಎಂದು ಬಿಡುತ್ತಾನೆ. ಇಡೀ ಅಸ್ತಿತ್ವವೇ ಕುಸಿದು ಬಿದ್ದಂತಾದ ತುಳಸಿ ಎಂಬ ಮಹಾಸೌಂದರ್ಯ ರಾಶಿಗೆ ಕಡುಗೋಪವುಕ್ಕಿ. ನನ್ನಂತ ಸಾಧ್ವಿಯ ಪ್ರೇಮವನ್ನು ನೀನು ನಿರಾಕರಿಸಿದ್ದೀಯಾ. ಯಾವ ಕಾರಣಕ್ಕಾಗಿ ನೀನು ನನ್ನ ಪವಿತ್ರ ಪ್ರೇಮವನ್ನು ತಿರಸ್ಕರಿಸಿದ್ದಿಯೋ ಅದು ಎಂದು ನಿನಗೆ ದಕ್ಕದೇ ಹೋಗಲಿ ಎಂದು ಶಪಿಸುತ್ತಾಳೆ.
ತನ್ನ ತಪ್ಪೇ ಇಲ್ಲದೇ ವಿನಾಕಾರಣವಾಗಿ ಶಪಿಸಿದ ತುಳಸಿಯ ಮೇಲೆ ಸಿಡಿದ ವಕ್ರತುಂಡ, ಭದ್ರೆ, ನನ್ನ ತಪ್ಪಿಲ್ಲದೇ, ಯಾವ ದೋಷವೂ ಇಲ್ಲದೆ ನನ್ನನ್ನು ವಿನಾಕಾರಣವಾಗಿ ಶಪಿಸಿದ್ದೀಯ. ನನ್ನ ಶಾಪಕ್ಕೂ ನೀನೀಗ ಅರ್ಹಳು. ಕೇಳಿಸಿಕೋ ಯಾವ ಸೌಂದರ್ಯದ ರೂಪವತಿ ಅನ್ನೊ ಅಮಲಲ್ಲಿ ನೀನು ನನ್ನನ್ನು ಶಪಿಸಿದ್ದಿಯೋ. ಆ ಪರಮಸುಂದರಿಯಾದ ನಿನ್ನನ್ನ ರಾಕ್ಷಸನೊಬ್ಬ ಮದುವೆಯಾಗುವಂತಾಗಲಿ ಎಂದು ಗಣಪ ಶಾಪವನ್ನಿಡುತ್ತಾನೆ.
ಹಿಂದೆ ಮುಂದೆ ಯೋಚನೆ ಮಾಡದೇ ಶಾಪವಿಟ್ಟು ಮರಳಿ ಗಣಪನಿಂದ ಶಾಪ ಪಡೆದ ತುಳಸಿ ಒಂದೇ ಕ್ಷಣದಲ್ಲಿ ಕುಸಿದು ಗಣಪನ ಎದುರು ಮಂಡಿಯೂರಿ, ಗಣನಾಥ, ನನ್ನದು ತಪ್ಪಾಗಿದೆ. ದಯವಿಟ್ಟು ಈ ಶಾಪದಿಂದ ನನ್ನನ್ನು ವಿಮೋಚಿಸು ಎಂದು ಗೋಗರೆಯುತ್ತಾಳೆ. ತುಳಸಿಯ ಗೋಳು ಕಂಡು ಕರಗಿದ ಗಣೇಶ, ದೇವಿ ಕೊಟ್ಟ ಶಾಪವನ್ನು ಮರಳಿ ಪಡೆಯಲು ಆಗುವುದಿಲ್ಲ. ಆದರೆ ಅದರ ಪರಿಣಾಮವನ್ನು ಕಡಿಮೆ ಮಾಡುತ್ತೇನೆ. ಭವಿಷ್ಯದಲ್ಲಿ ನೀನು ಪರಮಪವಿತ್ರ ಸಸ್ಯವಾಗಿ ಇಡೀ ಭೂಲೋಕದಲ್ಲಿ ಪೂಜಿಸಲ್ಪಡುವೆ.
ಎಲ್ಲ ಶುಭಕಾರ್ಯಗಳಲ್ಲಿಯೂ ನೀನು ಪೂಜಿಸಲ್ಪಡುವೆ. ಆದರೆ ನನ್ನ ಪೂಜೆಗೆ ಮಾತ್ರ ನೀನೆಂದೂ ಮೀಸಲಿರುವುದಿಲ್ಲ. ನನ್ನ ಪೂಜೆಯಲ್ಲಿ ನಿನ್ನನೆಂದೂ ಬಳಸುವುದಿಲ್ಲ. ಇದೇ ನಾನು ನಿನಗೆ ಕೊಡುತ್ತಿರುವ ವರ ಎಂದು ಹೇಳಿ ಆಕೆಯ ಮೇಲಿನ ಶಾಪದ ಪರಿಣಾಮವನ್ನು ಕಡಿಮೆ ಮಾಡುತ್ತಾನೆ ಗಣೇಶ.
ಇದು ಪೌರಾಣಿಕ ಕಥೆ ಹೇಳುವ ರೀತಿ.