ಕೈಲಾಸ ಪರ್ವತದಿಂದ ಗೌರಮ್ಮ ತನ್ನ ತವರಾದ ಭೂಮಿಗೆ ಬರುವ ಸಮಯ ಬಂದಿದೆ. ಗೌರಿ ಹಬ್ಬದಂದು ತವರಿಗೆ ಬರುವ ಗೌರಮ್ಮನನ್ನು ಉಪಚರಿಸಿ, ಆಕೆಗಾಗಿ ಬಾಗೀನ ಕೊಟ್ಟು ಸತ್ಕರಿಸುವ ಆಚರಣೆ ಇದೆ. ಈ ಬಾಗೀನವನ್ನು ನಂತರ ಮುತ್ತೈದೆಯರಿಗೆ ಬಾಗೀನ ನೀಡಲಾಗುತ್ತದೆ. ತಾಯಿ ಬಾಗೀನವನ್ನೂ ನೀಡಲಾಗುತ್ತದೆ. ಮೊರದಲ್ಲಿಟ್ಟು ಸೆರಗು ಮುಚ್ಚಿ ಕೊಡುವ ಈ ಬಾಗೀನದಲ್ಲಿ ಏನೆಲ್ಲ ಇರಬೇಕು ನೋಡೋಣ.
ಈ ಬಾರಿ ಸೆಪ್ಟೆಂಬರ್ 06 ರಂದು (ಶುಕ್ರವಾರ) ಗೌರಿ ಹಬ್ಬವಿದೆ. ಅಂದು ಬಿದಿರಿನಿಂದ ನೇಯ್ದು ತಯಾರಿಸಿದ ಮೊರದಲ್ಲಿ ಮನೆಗೆ ಮತ್ತು ಮಹಿಳೆಗೆ ಅಗತ್ಯವಿರುವ ಮಂಗಳಕರ ವಸ್ತುಗಳನ್ನು ಇರಿಸಲಾಗುತ್ತದೆ. ಮೊರವು ಹಿಂದಿನ ಕಾಲದಲ್ಲಿ ಬಹುಪಯುಕ್ತ ಅಡುಗೆ ಮನೆಯ ಪರಿಕರವಾಗಿತ್ತು. ಧಾನ್ಯ ಆರಿಸಲು, ಸ್ವಚ್ಛಗೊಳಿಸಲು ನೆರವಾಗುತ್ತಿತ್ತು. ಆದರೀಗ ಆಧುನಿಕ ಪರಿಕರಗಳು ಮೊರವನ್ನು ಮೂಲೆಗುಂಪಾಗಿಸಿವೆ. ಸಂಪ್ರದಾಯ ಮಾತ್ರ ಎಂದಿನಂತೆ ಹಬ್ಬದ ಆಚರಣೆಯಲ್ಲಿ ಮುಂದುವರೆದಿದೆ.
ಮೊರಾ ಸಮೃದ್ಧಿ ಮತ್ತು ಶಾಂತಿಯನ್ನು ಸೂಚಿಸುತ್ತದೆ. ಪ್ರಾಚೀನ ಕಾಲದಲ್ಲಿ ಮಹಿಳೆಯರು ಮೊರವನ್ನು ಲಕ್ಷ್ಮೀ ದೇವಿಯ ಸಂಕೇತ ಎಂದು ಪರಿಗಣಿಸಿದ್ದರು. ಸಾಮಾನ್ಯವಾಗಿ ಮದುವೆಯಾದ ಹೆಣ್ಣುಮಕ್ಕಳು ಗೌರಿ ವತ ಆಚರಿಸಿ ತಮ್ಮ ತಾಯಿಗೆ, ತಾಯಿಯು ಮಗಳಿಗೆ ಬಾಗೀನ ನೀಡಿಕೊಳ್ಳುತ್ತಾರೆ. ನಂತರ ಬಾಗೀನ ಪಡೆದವರ ಏಳ್ಗೆಗಾಗಿ ಹರಸಲಾಗುತ್ತದೆ.
ಮಗಳಿಗೆ ತಾಯಿಯು ದೀರ್ಘಾವಧಿಯ ವೈವಾಹಿಕ ಜೀವನ ಮತ್ತು ಶಾಂತಿಯನ್ನು ಆಶೀರ್ವದಿಸುತ್ತಾರೆ. ಬಾಗಿನ ವಿನಿಮಯವು ಮನೆಯವರಿಗೆ ಅಕ್ಷಯ ಸಮೃದ್ಧಿಯನ್ನು ಸ್ವಾಗತಿಸುವ ಸಂಕೇತವಾಗಿದೆ. ಮೊರಗಳು ಈಗ ಹಿಂದಿನಂತೆ ಬಳಕೆಯಾಗದ ಕಾರಣ ಅಲಂಕಾರಯುಕ್ತವಾದ ಮೊರಗಳನ್ನು ಕೆಲವರು ನೀಡುತ್ತಾರೆ. ಇವನ್ನು ಕನಿಷ್ಠ ಪಕ್ಷ ಗೋಡೆಯಲ್ಲಿ ಅಲಂಕಾರಕ್ಕಾಗಿಯಾದರೂ ಹಾಕಿಕೊಳ್ಳಬಹುದು ಎಂಬುದು ಉದ್ದೇಶ.
ಗೌರಿ ಬಾಗಿನದಲ್ಲಿ ಏನೆಲ್ಲ ಇಡಬೇಕು?
ಬಾಗಿನವು ಅಕ್ಕಿ ಮತ್ತು ನಾಲ್ಕು ವಿಧದ ಕಾಳುಗಳು, ಐದು ಪೂಜಾ ಸಾಮಗ್ರಿಗಳು, ಬೆಲ್ಲ, ಐದು ಸೌಂದರ್ಯವರ್ಧಕ ವಸ್ತುಗಳನ್ನು ಹೊಂದಿರಬೇಕು. ಅಂದರೆ 16 ವಸ್ತುಗಳಾದವು. ಬಾಗೀನದ ಮೇಲಿಡುವ ಈ 16 ವಸ್ತುಗಳು 16 ವಿವಿಧ ರೂಪಗಳಲ್ಲಿ ಗೌರಿ ದೇವಿಯ ಉಪಸ್ಥಿತಿಯನ್ನು ಸೂಚಿಸುತ್ತವೆ.
ಗೌರಿಯ 16 ರೂಪಗಳೆಂದರೆ ಯಶೋ ಲಕ್ಷ್ಮಿ, ವಿದ್ಯಾ ಲಕ್ಷ್ಮಿ, ಧೈರ್ಯ ಲಕ್ಷ್ಮಿ, ಧನ ಲಕ್ಷ್ಮಿ, ಸಂತಾನ ಲಕ್ಷ್ಮಿ, ಧಾನ್ಯ ಲಕ್ಷ್ಮಿ, ಗಜ ಲಕ್ಷ್ಮಿ, ವೀರ ಲಕ್ಷ್ಮಿ, ಸಾಮ್ರಾಜ್ಯ ಲಕ್ಷ್ಮಿ, ಮೋಕ್ಷ ಲಕ್ಷ್ಮೀ, ಸೌಮ್ಯ ಲಕ್ಷ್ಮಿ, ಸಿದ್ಧ ಲಕ್ಷ್ಮಿ, ಶ್ರೀ ಲಕ್ಷ್ಮಿ, ಸೌಭಾಗ್ಯ ಲಕ್ಷ್ಮಿ, ಪ್ರಸನ್ನ ಲಕ್ಷ್ಮಿ ಮತ್ತು ಜಯ ಲಕ್ಷ್ಮಿ.
ಹಬಲ ಹೆಚ್ಚಿಸುವ ಧಾನ್ಯಗಳು
ಸಾಮಾನ್ಯವಾಗಿ, ನಮ್ಮ ದಿನನಿತ್ಯದ ಆಹಾರಕ್ಕೆ ಸೇರಿಸುವ ಒಂಬತ್ತು ವಿಧದ ಬೇಳೆಕಾಳುಗಳು ಮತ್ತು ಧಾನ್ಯಗಳನ್ನು ಮೊರವನ್ನು ತುಂಬಲು ಬಳಸಲಾಗುತ್ತದೆ. ಗೌರಿ ವ್ರತ ಕೈಗೊಂಡವರು ನೀಡುವ ಬಾಗೀನದ ಸಂಖ್ಯೆ 2 ಅಥವಾ 5 ಆಗಿರಬೇಕು. ಮದುವೆಯ ನಂತರ ಮೊದಲ ಗೌರಿ ವ್ರತ ಆಚರಿಸುವವರು 16 ಬಾಗೀನಗಳನ್ನು ನೀಡುವುದು ಸಂಪ್ರದಾಯವಾಗಿದೆ.
ಗೌರಿ ಬಾಗೀನ
ಎರಡು ಮೊರಾಗಳು
ಒಂದು ಬಾಳೆ ಎಲೆ
ಅಕ್ಕಿ
ಕೆಂಪು ಬೇಳೆ
ಉದ್ದಿನ ಬೇಳೆ
ಕಡ್ಲೆ ಬೇಳೆ
ಬೆಂಗಾಲಿ ಗ್ರಾಂ
ಹೆಸರು ಬೇಳೆ
ಗೋಧಿ/ ರವೆ
ಬೆಲ್ಲ
ಗಾಜಿನ ಬಳೆಗಳು – 1 ಡಜನ್
ಬಳೆ ಬಿಚ್ಚೋಲೆ – 1 ಜೋಡಿ
ಅರಿಶಿನ
ಕುಂಕುಮ/ ಸಿಂಧೂರ
ಕನ್ನಡಿ – ತುಂಡು
ಬಾಚಣಿಗೆ
ಕಾಜಲ್
ಕುಪ್ಪಸ
ಅರಿಶಿನದ 16 ತುಂಡುಗಳು (ಈ ವಸ್ತುಗಳನ್ನು ಸ್ವರ್ಣ ಗೌರಿಯನ್ನು ಅಲಂಕರಿಸುವ ಮಹಿಳೆಗೆ ನೀಡಲಾಗುತ್ತದೆ.)
ಹಣ್ಣುಗಳು
ತೆಂಗಿನಕಾಯಿ
ಹೀಗೆ ಸಿದ್ಧಪಡಿಸಿ
ಗೌರಿ ಬಾಗಿನವನ್ನು ವಿನಿಮಯ ಮಾಡಿಕೊಳ್ಳುವುದು ಮೊದಲನೆಯದಾಗಿ, ಮೊರವನ್ನು ನೀರಿನಿಂದ ತೊಳೆದು ನಂತರ ಅದನ್ನು ಒಣಗಿಸಿ. ರೇಖೆಗಳು ಸಂಧಿಸುವ ಪ್ರದೇಶಗಳಲ್ಲಿ ಒಳಗೆ ಕುಂಕುಮ ಮತ್ತು ಹೊರಗೆ ಅರಿಶಿನದಿಂದ ರಂಗೋಲಿ ರಚಿಸಿ. ಮೊರದೊಳಗೆ ಬಾಗೀನ ಪದಾರ್ಥಗಳನ್ನಿರಿಸಿ ಮತ್ತೊಂದು ಮೊರದಿಂದ ಮುಚ್ಚಿ. ಮೇಲೆ ಹಣ್ಣುಗಳೊಂದಿಗೆ ತಾಂಬೂಲ ಪದಾರ್ಥಗಳನ್ನಿರಿಸಿ.
ವ್ರತದ ಬಳಿಕ ಬಾಗೀನ ನೀಡುವುದು ಹೀಗೆ
ಮುತ್ತೈದೆಯನ್ನು ಮಣೆಯ ಮೇಲೆ ಕೂರಿಸಿ. ಅವಳ ಕೆನ್ನೆ, ಮುಂಗೈ ಮತ್ತು ಪಾದಗಳಿಗೆ ಅರಿಶಿನ ಹಚ್ಚಿ. ನಂತರ ಕುಂಕುಮ, ಹೂವುಗಳನ್ನು ನೀಡಿ. ಕೊಡುವ ಹಾಗೂ ಪಡೆವ ಹೆಂಗಸರು ಬಾಗೀನವನ್ನು ತಮ್ಮ ಸೀರೆಯ ಸೆರಗಿನಿಂದ ಹಿಡಿದುಕೊಳ್ಳಬೇಕು. ಈ ಪ್ರಕ್ರಿಯೆಯು ಪ್ರತಿ ಮಹಿಳೆಯಲ್ಲಿನ ಮಾತೃತ್ವವನ್ನು ಪ್ರತಿನಿಧಿಸುತ್ತದೆ. ನಂತರ ಬಾಗೀನ ನೀಡಿ ಹಿರಿಯರು ಕಿರಿಯರಿಗೆ ಆಶೀರ್ವದಿಸಬೇಕು.