ಚೆನ್ನೈ: 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆವೃತ್ತಿಯು ಮೆಗಾ ಹರಾಜಿಗೂ ಮುನ್ನವೇ ಭಾರೀ ಕುತೂಹಲ ಹೆಚ್ಚಿಸಿದೆ. ಏಕೆಂದರೆ ಮೂರು ವರ್ಷಗಳ ಬಳಿಕ ಮೆಗಾ ಹರಾಜು ನಡೆಯುತ್ತಿದ್ದು, ಬಲಿಷ್ಠ ಆಟಗಾರರು ಯಾವ ತಂಡವನ್ನು ಸೇರಲಿದ್ದಾರೆ ಅನ್ನೋ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ 2025ರ ಐಪಿಎಲ್ನಲ್ಲಿ ಎಂ.ಎಸ್ ಧೋನಿ (MS Dhoni) ಕಣಕ್ಕಿಳಿಯುವ ಬಗ್ಗೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳಿವು ಕೊಟ್ಟಿದ್ದಾರೆ.
ಸಿಎಸ್ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad), ಮಹಿ ಮತ್ತೊಂದು ಆವೃತ್ತಿಗೆ ಚೆನ್ನೈ ತಂಡದ ಕೈ ಹಿಡಿಯಬೇಕೆಂದು ಬಯಸಿದ್ದಾರೆ. ಜೊತೆಗೆ ರುತುರಾಜ್ಗೆ ಇನ್ನಷ್ಟು ನಾಯಕತ್ವದ ಗುಣಗಳನ್ನು ಕಲಿಸಬೇಕಿದೆ ಆದ್ದರಿಂದ ಧೋನಿ ಮುಂದಿನ ಆವೃತ್ತಿಯಲ್ಲೂ ಸಿಎಸ್ಕೆ ತಂಡದ ಪರ ಆಡಲಿದ್ದಾರೆ ಎಂದು ಸಿಎಸ್ಕೆ ತಂಡದ ಮಾಜಿ ಬ್ಯಾಟರ್ ಸುರೇಶ್ ರೈನಾ ಹೇಳಿದ್ದಾರೆ.
ಸ್ಫೋರ್ಟ್ಸ್ ಟಾಕ್ ಜೊತೆಗೆ ಮಾತನಾಡಿದ ಸುರೇಶ್ ರೈನಾ (Suresh Raina), ಐಪಿಎಲ್ನಲ್ಲಿ ಧೋನಿ ಅವರ ಪಾಲಿಗೆ ಮತ್ತೊಂದು ಸೀಸನ್ ಉಳಿದಿರುವಂತೆ ಕಾಣುತ್ತಿದೆ. ಕಳೆದ ವರ್ಷ ಅವರು ಹೇಗೆ ಬ್ಯಾಟಿಂಗ್ ಮಾಡಿದ್ದಾರೆ ಎಂಬುದನ್ನು ಪರಿಗಣಿಸಿ 2025ರ ಐಪಿಎಲ್ನಲ್ಲಿ ಆಡಬೇಕೆಂದು ಬಯಸುತ್ತೇನೆ ಎಂದಿದ್ದಾರೆ.