ಮುಂಬೈ: 2024ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ಸಿ ವಿಚಾರವಾಗಿ ರೋಹಿತ್-ಹಾರ್ದಿಕ್ ಪಾಂಡ್ಯ ನಡುವಿನ ಕಿತ್ತಾಟ ಚರ್ಚೆಗೆ ಗ್ರಾಸವಾಗಿತ್ತು. ಇವರಿಬ್ಬರ ಕಿತ್ತಾಟ ಟಿ20 ವಿಶ್ವಕಪ್ನಲ್ಲೂ (T20 World Cup 2024) ಮುಂದುವರಿಯಲಿದೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದ್ರೆ ಅದಕ್ಕೆ ವಿರುದ್ಧವಾಗಿ ನಡೆದುಕೊಂಡ ಪಾಂಡ್ಯ-ರೋಹಿತ್ ಟ್ರೋಫಿ ಗೆದ್ದು ತರುವಲ್ಲಿ ಯಶಸ್ವಿಯಾದರು. ಅಷ್ಟಕ್ಕೂ ಇವರಿಬ್ಬರ ಮುನಿಸು ಕೊನೆಗೊಂಡಿದ್ದು ಹೇಗೆ? ಅನ್ನೋ ಆಸಕ್ತಿದಾಯಕ ವಿಚಾರವನ್ನ ಹಿರಿಯ ಪತ್ರಕರ್ತ ವಿಮಲ್ ಕುಮಾರ್ ರಿವೀಲ್ ಮಾಡಿದ್ದಾರೆ.
ಹೌದು. 2024ರ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ನಲ್ಲಿದ್ದ ಪಾಂಡ್ಯ (Hardik Pandya) ಅವರನ್ನು ಕರೆ ತಂದು ಮುಂಬೈ ತಂಡದ ನಾಯಕತ್ವದ ಹೊಣೆ ನೀಡಲಾಯಿತು. ಆದ್ರೆ 13 ವರ್ಷಗಳಿಂದ ತಂಡಕ್ಕೆ 5 ಬಾರಿ ಟ್ರೋಫಿ ತಂದುಕೊಟ್ಟ ರೋಹಿತ್ (Rohit Sharma) ಅವರನ್ನ ನಾಯಕ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಪಾಂಡ್ಯ ವಿರುದ್ಧ ಮುಗಿಬಿದ್ದಿದ್ದರು, ಮೈದಾನದಲ್ಲಿ ನಾಯಿಯೊಂದು ಪ್ರವೇಶಿಸಿದಾಗ ಹಾರ್ದಿಕ್ ಹಾರ್ದಿಕ್ ಅಂತ ಕೂಗಿ ಅವಮಾನಿಸಿದ್ದರು.
ಇಷ್ಟೆಲ್ಲಾ ಆಗಿದ್ದರೂ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಂಡ್ಯ ನಿರ್ಣಾಯಕ ಪಾತ್ರ ವಹಿಸಿದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆಲ್ಲಲು ಸಹಕಾರಿಯಾದರು. ಆದರೀಗ ರೋಹಿತ್-ಪಾಂಡ್ಯ ಅವರ ಮುನಿಸು ಕೊನೆಗೊಂಡಿದ್ದು ಹೇಗೆ ಅನ್ನುವ ಆಸಕ್ತಿದಾಯಕ ವಿಚಾರವನ್ನು ಹಿರಿಯ ಪತ್ರಕರ್ತ ವಿಮಲ್ ಕುಮಾರ್ (Vimal Kumar) ಹಂಚಿಕೊಂಡಿದ್ದಾರೆ.
ಸಂವಾದವೊಂದರಲ್ಲಿ ಮಾತನಾಡಿದ ವಿಮಲ್ ಕುಮಾರ್, ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ನೆಟ್ಸ್ಗೆ ಹೋದಾಗ ಹಾರ್ದಿಕ್ ಮತ್ತು ರೋಹಿತ್ ಮಧ್ಯೆ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿದೆ. ಮೊದಲ ದಿನ ಅವರಿಬ್ಬರೂ ಮಾತನಾಡಿದ್ದು ಕಂಡುಬರಲಿಲ್ಲ. ಆದ್ರೆ 2ನೇ ದಿನ ಅವರಿಬ್ಬರು ಸಂಭಾಷಣೆ ನಡೆಸುತ್ತಿದ್ದ ರೀತಿ ನೋಡಿ ನನಗೆ ತುಂಬಾ ಖುಷಿ ಆಯ್ತು. ಹಾರ್ದಿಕ್ ಪಾಂಡ್ಯ, ರೋಹಿತ್ ಜೊತೆಗೆ ಮಾತನಾಡುತ್ತಿದ್ದ ರೀತಿ ನೋಡಿ ನನ್ನ ಕಣ್ಣನ್ನು ನಾನೇ ನಂಬಲು ಸಾಧ್ಯವಾಗಲಿಲ್ಲ. ಇಬ್ಬರೂ ಒಬ್ಬರಿಗೊಬ್ಬರು ಸಲಹೆ ನೀಡುತ್ತಿದ್ದರು. ಆಗ ತಂಡದ ಪ್ರದರ್ಶನದ ಬಗ್ಗೆ ಸಂಪೂರ್ಣ ವಿಶ್ವಾಸ ಮೂಡಿತು ಅಂತ ಭಾವುಕರಾಗಿದ್ದಾರೆ.
ಒಬ್ಬರಿಗೊಬ್ಬರು ಸಲಹೆ ನೀಡುತ್ತಾ ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಅಲ್ಲದೇ ಡ್ರೆಸ್ಸಿಂಗ್ ರೂಮ್ನ ವಾತಾವರಣವೂ ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಟ್ಟಿನಲ್ಲಿ ಭಾರತ ತಂಡದ ಸಲುವಾಗಿ ಇವರಿಬ್ಬರು ಒಂದಾದರು. ಇದರ ಕ್ರೆಡಿಟ್ ಏನಿದ್ದರೂ ಅಂದಿನ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸೇರಬೇಕು ಎಂದು ಹೇಳಿದ್ದಾರೆ.