2022ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡಕ್ಕೆ ಮೊದಲ ಎರಡು ಆವೃತ್ತಿಗಳಲ್ಲಿ ಗೌತಮ್ ಗಂಭೀರ್ ಮೆಂಟರ್ (Mentor) ಆಗಿದ್ದರು. ಆದ್ರೆ 2024ರ ಐಪಿಎಲ್ನಲ್ಲಿ ಗಂಭೀರ್ ಕೋಲ್ಕತ್ತಾ ನೈಟ್ರೈಡರ್ಸ್ ತಂಡಕ್ಕೆ ಸೇರ್ಪಡೆಯಾದರು. ಅಂದಿನಿಂದ ಖಾಲಿ ಉಳಿದಿದ್ದ ಸ್ಥಾನಕ್ಕೆ ಈಗ ಫ್ರಾಂಚೈಸಿ ಜಹೀರ್ ಖಾನ್ ಅವರನ್ನ ನೇಮಕ ಮಾಡಿಕೊಂಡಿದೆ.
ಈ ಮಾಹಿತಿಯನ್ನು ಲಕ್ನೋ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲದೇ ಲಕ್ನೋ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಹೀರ್ ಖಾನ್ಗೆ ಎಲ್ಎಸ್ಜಿ ಮೆಂಟರ್ ಜರ್ಸಿ ಕೊಟ್ಟು ಸ್ವಾಗತಿಸಿದ್ದಾರೆ.
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಎಲ್ಎಸ್ಜಿ ತಂಡ ಐಪಿಎಲ್ 2022-2023ರ ಎರಡೂ ಆವೃತ್ತಿಗಳಲ್ಲಿ ಸತತವಾಗಿ ಪ್ಲೇ ಆಫ್ಸ್ ತಲುಪಿದ ಸಾಧನೆ ಮಾಡಿತ್ತು. ಬಳಿಕ ಗಂಭೀರ್ ಕೆಕೆಆರ್ ತಂಡ ಸೇರಿಕೊಂಡರು. 2024ರಲ್ಲಿ ಲಕ್ನೋ ತಂಡ ಲೀಗ್ ಸುತ್ತಿನಲ್ಲೇ ಹೊರಬಿದ್ದಿತು. ಇದೀಗ ಹಳಿ ತಪ್ಪಿರುವ ಎಲ್ಎಸ್ಜಿ ತಂಡವನ್ನು ಮೇಲೆತ್ತುವ ಜವಾಬ್ದಾರಿ ಜಹೀರ್ ಖಾನ್ ಮೇಲಿದೆ.
ಜಹೀರ್ ಖಾನ್ 10 ಐಪಿಎಲ್ ಆವೃತ್ತಿಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರವಾಗಿ ಆಡಿದ್ದಾರೆ. ಅಲ್ಲದೇ ಮೆಂಟರ್ ಆಗಿ ನೇಮಕಗೊಂಡಿದ್ದಕ್ಕೆ ಜಹೀರ್ ಖಾನ್ ಸಹ ಹರ್ಷ ವ್ಯಕ್ತಪಡಿಸಿದ್ದಾರೆ.