ಆತಿಥೇಯ ಪಾಕಿಸ್ತಾನ ಎದುರು ಇಲ್ಲಿನ ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಐತಿಹಾಸಿಕ 10 ವಿಕೆಟ್ಗಳ ಜಯ ದಾಖಲಿಸಿತು. ಪಂದ್ಯದ ಐದನೇ ಹಾಗೂ ಅಂತಿಮ ದಿನದಾಟದಲ್ಲಿ ಪಾಕ್ ತಂಡ ಕಳಪೆ ಬ್ಯಾಟಿಂಗ್ಗೆ ಭಾರಿ ಬೆಲೆತೆತ್ತು ಮುಖಭಂಗ ಅನುಭವಿಸಿದೆ. ಇದೇ ವೇಳೆ ಬಾಂಗ್ಲಾದ ಸ್ಟಾರ್ ಆಲ್ರೌಂಡರ್ ಶಕಿಬ್ ಅಲ್ ಹಸನ್ ಅನಗತ್ಯ ವರ್ತನೆ ತೋರಿದ್ದ ಕಾರಣ ಈಗ ದಂಡಕ್ಕೆ ಗುರಿಯಾಗಿದ್ದಾರೆ.
ಪಂದ್ಯದ ಕೊನೇ ದಿನದಾಟದಲ್ಲಿ ಅರ್ಧಶತಕ ಬಾರಿಸಿ ಪಾಕಿಸ್ತಾನ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಯತ್ನ ಮಾಡುತ್ತಿದ್ದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಝ್ವಾನ್, ಸ್ಪಿನ್ನರ್ಗಳ ಎದುರು ಬ್ಯಾಟ್ ಮಾಡುವಾಗ ಅನಗತ್ಯ ರೀತಿಯಲ್ಲಿ ಸ್ಟ್ರೈಕ್ ಪಡೆಯುವ ಮುನ್ನ ಕಾಲಹರಣ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಎಡಗೈ ಸ್ಪಿನ್ನರ್ ಶಕಿಬ್ ಅಲ್ ಹಸನ್ ಬೌಲಿಂಗ್ ರನ್ ಅಪ್ ಪೂರೈಸಿದರೂ ಸ್ಟ್ರೈಕ್ ತೆಗೆದುಕೊಂಡಿರದ ರಿಝ್ವಾನ್ ಕಡೆಗೆ ಚೆಂಡನ್ನು ಎಸೆದಿದ್ದರು.
ಶಕಿಬ್ ಅಲ್ ಹಸನ್ ತಮ್ಮ ವರ್ತನೆಗೆ ಕೂಡಲೇ ಸ್ಟ್ರೈಕ್ ಅಂಪೈರ್ ರಿಚರ್ಡ್ ಕೆಟಲ್ಬಾರೊ ಅವರ ಬಳಿ ಕ್ಷಮೆ ಕೇಳಿದ್ದರು ಕೂಡ. ಆದರೆ, ಇದು ಐಸಿಸಿ ನಿಯಮದ ಉಲ್ಲಂಘನೆ ಆಗಿರುವ ಕಾರಣ ದಂಡ ವಿಧಿಸಲಾಗಿದೆ.