ಅಭುದಾಬಿ: ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ನತ್ತ ಆಟಗಾರರ ಆಸಕ್ತಿ ಕಡಿಮೆಯಾಗುತ್ತಿದೆ. ಆದ್ದರಿಂದ ಟೆಸ್ಟ್ ಕ್ರಿಕೆಟ್ಗೆ (Test Cricket) ಉತ್ತೇಜನ ನೀಡುವ ಸಲುವಾಗಿ, ಯುವ ಕ್ರಿಕೆಟಿಗರನ್ನು ಸೆಳೆಯವ ನಿಟ್ಟಿನಲ್ಲಿ ಐಸಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. 125 ಕೋಟಿ ರೂ. (15 ಮಿಲಿಯನ್ USD) ಮೊತ್ತದ ನಿಧಿ ಮೀಸಲಿಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನಿರ್ಧರಿಸಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (Cricket Australia) ಐಸಿಸಿಗೆ ಈ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಐಸಿಸಿ ಟೆಸ್ಟ್ ಕ್ರಿಕೆಟ್ ಉತ್ತೇಜಿಸಲು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೂರ್ನಿ ಆಯೋಜಿಸಿದೆ. 2019 ರಿಂದ 2023ರ ವರೆಗೆ ಎರಡು ಆವೃತ್ತಿಗಳೂ ಕಳೆದು, ಇದೀಗ 3ನೇ ಆವೃತ್ತಿಗೆ ಕಾಲಿಟ್ಟಿದೆ. ಈ ನಡುವೆ ಐಸಿಸಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ನಿಧಿಯ ಮೂಲಕ ಟೆಸ್ಟ್ ಕ್ರಿಕೆಟ್ ಆಡಲಿರುವ ಆಟಗಾರರ ಪಂದ್ಯದ ಕನಿಷ್ಠ ಸಂಭಾವನೆಯನ್ನು ಹೆಚ್ಚಿಸುವ ಜೊತೆಗೆ ವಿದೇಶಿ ಸರಣಿಗಳಿಗೆ ತಂಡಗಳನ್ನು ಕಳುಹಿಸುವ ತಂಡದ ಪ್ರವಾಸ ಶುಲ್ಕದ ಜೊತೆಗೆ ಟೆಸ್ಟ್ ಕ್ರಿಕೆಟ್ ಆಡಲಿರುವ ಪ್ರತಿ ಆಟಗಾರರರಿಗೆ ಕನಿಷ್ಠ 8 ಲಕ್ಷ ರೂ. ಸಂಭಾವನೆ ನೀಡಲು ಇದು ನೆರವಾಗಲಿದೆ.
ಟೆಸ್ಟ್ ಕ್ರಿಕೆಟ್ಗೆ ಆದ್ಯತೆ ನೀಡುವ ಜೊತೆಗೆ ಆಟಗಾರರನ್ನು ಪ್ರೋತ್ಸಾಹಿಸಲು ಬಿಸಿಸಿಐ ಹೊಸ ಯೋಜನೆಯ ಅಡಿಯಲ್ಲಿ ಈಗಾಗಲೇ ಭಾರತದ ಟೆಸ್ಟ್ ಕ್ರಿಕೆಟಿಗರಿಗೆ ಬೋನಸ್ ರೂಪದಲ್ಲಿ ಹೆಚ್ಚಿನ ಸಂಭಾವನೆ ನೀಡುತ್ತಿದೆ. ವಾರ್ಷಿಕ ಶೇ.75 ಟೆಸ್ಟ್ ಪಂದ್ಯಗಳಲ್ಲಿ ಭಾರತದ ತಂಡವನ್ನು ಪ್ರತಿನಿಧಿಸಲಿರುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ತಲಾ 45 ಲಕ್ಷ ರೂ. ಜೊತೆಗೆ ಪಂದ್ಯದ ಶುಲ್ಕ 15 ಲಕ್ಷ ರೂ. ನೀಡಲಿದ್ದು, ಶೇ.50-70 ಪಂದ್ಯಗಳನ್ನು ಆಡಲಿರುವ ಆಟಗಾರರು ಪ್ರತಿ ಪಂದ್ಯಕ್ಕೆ ತಲಾ 30 ಲಕ್ಷ ಬೋನಸ್ ಪಡೆದುಕೊಳ್ಳಲಿದ್ದಾರೆ.
ಭಾರತಕ್ಕೆ ಈ ಲಾಭವಿಲ್ಲ?
ಐಸಿಸಿಯ ಈ ನಿಧಿ ಯೋಜನೆಯ ಲಾಭ, ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳಿಗೆ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ರಾಷ್ಟ್ರಗಳು ಈಗಾಗಲೇ ತಮ್ಮ ತಂಡದ ಆಟಗಾರರಿಗೆ ಉತ್ತಮ ಸಂಭಾವನೆ ನೀಡುತ್ತಿದೆ. ಜೊತೆಗೆ ಶ್ರೀಮಂತ ಕ್ರಿಕೆಟ್ ಸಂಸ್ಥೆಗಳೆಂದು ಗುರುತಿಸಿಕೊಂಡಿವೆ. ಆದ್ದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವೆಸ್ಟ್ ಇಂಡೀಸ್, ಪಾಕಿಸ್ತಾನ ಕ್ರಿಕೆಟ್ ಮಂಡಳಿಯಂತಹ ಸಂಸ್ಥೆಗಳ ಚೇತರಿಕೆ ಈ ನಿಧಿ ಸಹಕಾರಿಯಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.