ಢಾಕಾ: ಕೊಲೆ ಪ್ರಕರಣದ ಆರೋಪಿಯಾಗಿರುವ ಬಾಂಗ್ಲಾದೇಶ ಪುರುಷರ ಕ್ರಿಕೆಟ್ ತಂಡದ ಆಲ್ರೌಂಡರ್ ಶಕೀಬ್ ಅಲ್ ಹಸನ್ (Shakib Al Hasan) ಅವರನ್ನ ಕೂಡಲೇ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ಬ್ಯಾನ್ ಮಾಡುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (Bangladesh Cricket Board) ನೋಟಿಸ್ ನೀಡಲಾಗಿದೆ.
ಸದ್ಯ ರಾವಲ್ಪಿಂಡಿಯಲ್ಲಿರುವ ಶಕೀಬ್ ಪಾಕಿಸ್ತಾನ (Pakistan_ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯ (Test Series) ಭಾಗವಾಗಿದ್ದಾರೆ. ಈ ನಡುವೆ ಬಾಂಗ್ಲಾ ರ್ಯಾಲಿಯಲ್ಲಿ ಕೊಲೆಯಾದ ರುಬೆಲ್ ಎಂಬಾತನ ತಂದೆ ರಫೀಕುಲ್ ಇಸ್ಲಾಂ ಪರ ವಕೀಲರು ಶಕೀಬ್ ಅವರನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಶಕೀಬ್ ಅವರನ್ನ ಕೂಡಲೇ ಕ್ರಿಕೆಟ್ನಿಂದ ನಿಷೇಧಿಸುವಂತೆ ಮಂಡಳಿಯನ್ನು ಕೋರಿದ್ದಾರೆ. ಆದ್ರೆ ಪಾಕ್ ವಿರುದ್ಧ ಟೆಸ್ಟ್ ಪಂದ್ಯ ಮುಗಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಬಿ ಅಧ್ಯಕ್ಷ ಫಾರುಕ್ ಅಹ್ಮದ್ ತಿಳಿಸಿದ್ದಾರೆ.
ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲಿ ಇದೇ ಆಗಸ್ಟ್ 7ರಂದು ಮುಸ್ಲಿಂ ಮುಖಂಡ ರಫೀಕುಲ್ನ ಪುತ್ರ ರುಬೆಲ್ ಎಂಬಾತನ ಹತ್ಯೆಯಾಗಿತ್ತು. ಢಾಕಾದ ಅಡಬೋರ್ನ ರಿಂಗ್ರಸ್ತೆಯಲ್ಲಿ ನಡೆಯುತ್ತಿದ್ದ ರ್ಯಾಲಿ ವೇಳೆ ರುಬೆಲ್ನ ಎದೆ ಮತ್ತು ಹೊಟ್ಟೆ ಭಾಗಕ್ಕೆ ಗುಂಡು ಹಾರಿಸಲಾಗಿತ್ತು. ಘಟನೆ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಕೀಬ್ ಹಾಗೂ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ನೂರಾರು ಮಂದಿ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ.