ಅಮೆರಿಕ ಮೂಲದ ಐಟಿ ದಿಗ್ಗಜ ಸಂಸ್ಥೆ ಇಂಟರ್ನ್ಯಾಷನಲ್ ಬಿಸಿನೆಸ್ ಮಷಿನ್ಸ್ (IBM) ಚೀನಾದ ಪ್ರಮುಖ ಸಂಶೋಧನಾ ವಿಭಾಗವನ್ನು ಮುಚ್ಚಲು ನಿರ್ಧರಿಸಿದ್ದು ಇದರಿಂದ 1,000ಕ್ಕೂ ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಸದ್ಯ ಚೀನಾದ ಕಚೇರಿಯೂ ಬೆಂಗಳೂರಿಗೆ ಸ್ಥಳಾಂತರಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಐಬಿಎಂ ಚೀನಾದಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಟೆಸ್ಟಿಂಗ್ ಶಾಖೆಗಳನ್ನು ಮುಚ್ಚಲು ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ. ಆರ್ಥಿಕ ಕುಸಿತದ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಜತೆಗೆ ಚೀನಾ ಸ್ಥಳೀಯ ಕಂಪನಿಗಳ ಪರವಾಗಿದೆ ಎಂಬ ಆತಂಕದಿಂದಾಗಿ ವಿದೇಶಿ ಹೂಡಿಕೆ ಭಾಗಶಃ ನಿಧಾನಗೊಂಡಿರುವುದು ಕೂಡ ಕಚೇರಿ ಸ್ಥಳಾಂತರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಕಚೇರಿ ತೆರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಐಬಿಎಂ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಐಬಿಎಂ ಕೆಲವು ತಿಂಗಳ ಹಿಂದೆಯೂ ಉದ್ಯೋಗ ಕಡಿತಗೊಳಿಸಿತ್ತು. ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿ ಉದ್ಯೋಗ ಕಡಿತಗೊಂಡಿತ್ತು. ಐಬಿಎಂನ ಮುಖ್ಯ ಸಂವಹನ ಅಧಿಕಾರಿ ಜೊನಾಥನ್ ಅಡಾಶೆಕ್ ಅವರು ಇಲಾಖೆಯ ಉದ್ಯೋಗಿಗಳೊಂದಿಗೆ ನಡೆಸಿದ ಸಭೆಯಲ್ಲಿ ವಜಾಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಐಬಿಎಂ 3,900 ಜನರನ್ನು ಕೆಲಸದಿಂದ ತೆಗೆಯಲಿರುವುದಾಗಿ ಜನವರಿಯಲ್ಲಿ ಹೇಳಿತ್ತು. ಈ ಕಾರ್ಯದಿಂದ ಸಂಸ್ಥೆಗೆ 400 ಮಿಲಿಯನ್ ಡಾಲರ್ (33,12,92,00,000 ರೂ.) ಹಣ ಉಳಿತಾಯವಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಣವನ್ನು ಪುನಾರಚನೆ ಕಾರ್ಯಗಳಿಗೆ ಬಳಸಲಾಗುವುದು ಎಂದು ಅಂದು ಐಬಿಎಂನ ಚೀಫ್ ಫೈನಾನ್ಷಿಯಲ್ ಆಫೀಸರ್ ಜೇಮ್ಸ್ ಕೆವನಾಘ್ ತಿಳಿಸಿದ್ದರು.