ಶಾನ್ ಮಸೂದ್ ಸಾರಥ್ಯದ ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ತಂಡ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಾಂಗ್ಲಾದೇಶ ಎದುರು ಟೆಸ್ಟ್ ಪಂದ್ಯ ಸೋತಿದೆ. ಇಲ್ಲಿನ ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ 3ನೇ ಆವೃತ್ತಿಯ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಭಾಗವಾಗಿ ನಡೆಯುತ್ತಿರುವ 2 ಟೆಸ್ಟ್ಗಳ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಪಾಕಿಸ್ತಾನ ತಂಡ 10 ವಿಕೆಟ್ಗಳ ಸೋಲಿನ ಮರ್ಮಾಘಾತ ಅನುಭವಿಸಿದೆ.
ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಪಾಕಿಸ್ತಾನ ತಂಡ ಬೃಹತ್ ಮೊತ್ತ ದಾಖಲಿಸುವ ಅವಕಾಶವನ್ನು ಕೈಚೆಲ್ಲಿ 448/6 ರನ್ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಮೊದಲ ಇನಿಂಗ್ಸ್ ಮುನ್ನಡೆ ಪಡೆದು ಪಂದ್ಯ ಗೆದ್ದುಕೊಳ್ಳುವುದು ಪಾಕಿಸ್ತಾನ ತಂಡದ ಕ್ಯಾಪ್ಟನ್ ಶಾನ್ ಮಸೂದ್ ಅವರ ಲೆಕ್ಕಾಚಾರವಾಗಿತ್ತು.
ಆತಿಥೇಯರ ಎಲ್ಲ ಲೆಕ್ಕಾಚಾರಗಳನ್ನು ಪ್ರವಾಸಿ ಪಡೆ ಬುಡಮೇಲಾಗಿಸಿತು. ಅನುಭವಿ ಬ್ಯಾಟರ್ ಮುಷ್ಫಿಕರ್ ರಹೀಮ್ (191) ಬಾರಿಸಿದ ಮನಮೋಹಕ ಶತಕದ ಬಲದಿಂದ ಮೊದಲ ಇನಿಂಗ್ಸ್ನಲ್ಲಿ 565 ರನ್ಗಳನ್ನು ದಾಖಲಿಸಿದ ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್ನಲ್ಲಿ 167 ರನ್ಗಳ ಮುನ್ನಡೆ ಪಡೆದುಕೊಂಡಿತು. ಬಳಿಕ ಎರಡನೇ ಇನಿಂಗ್ಸ್ನಲ್ಲಿ ಪಾಕಿಸ್ತಾನ ತಂಡದ ಬ್ಯಾಟಿಂಗ್ ಪ್ರದರ್ಶನ ಅಕ್ಷರಶಃ ಹಳ್ಳಹಿಡಿಯಿತು.
ಬ್ಯಾಟಿಂಗ್ ವೈಫಲ್ಯ ಕಾರಣ ಅನುಭವಿಸಿದ ಅಚ್ಚರಿಯ ಸೋಲಿನ ಬಗ್ಗೆ ಪಂದ್ಯದ ಬಳಿಕ ಮಾತನಾಡಿರುವ ಪಾಕ್ ನಾಯಕ ಶಾನ್ ಮಸೂದ್, ಕಳಪೆ ಆಟವನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಸೋಲಿಗೆ ದೇಶದ ಜನತೆಯಲ್ಲಿ ಕ್ಷಮೆ ಕೂಡ ಕೇಳಿದ್ದು, ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.