ತನ್ನ ನೇರ ನುಡಿಯಿಂದ ಇಷ್ಟವಾಗುವ ಮತ್ತು ಕೆಲವೊಮ್ಮೆ ವಿವಾದಕ್ಕೀಡಾಗುವ ಸಿದ್ದರಾಮಯ್ಯ, ಅದೃಷ್ಟ ನಂಬದ ಅದೃಷ್ಟವಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಚುನಾವಣೆಯಲ್ಲಿ ಗೆದ್ದಾಗ ಅಧಿಕಾರ ಹಿಡಿಯುತ್ತಾರೆ. ಸೋತಾಗ ಪಕ್ಷದ ಜವಾಬ್ದಾರಿ ವಹಿಸುತ್ತಾರೆ. 1983ರಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಇವರು,
ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದರು. 1985ಕ್ಕೆ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ರೇಷ್ಮೆ ಮತ್ತು ಪಶುಸಂಗೋಪನೆ ಮಂತ್ರಿಯಾಗಿದ್ದರು. ತಾವು ಗೆದ್ದ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಸಿದ್ದರಾಮಯ್ಯ, ಅದೃಷ್ಟವಂತ ರಾಜಕಾರಣಿ ಎಂದರೆ ತಪ್ಪಾಗದು.
ಇನ್ನೂ 2023ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರದಲ್ಲಿ ಸಿದ್ದರಾಮಯ್ಯ ತಮ್ಮ ಆಸ್ತಿಯ ವಿವರ ಬಿಚ್ಚಿಟ್ಟಿದ್ದಾರೆ. ಅಂದ ಹಾಗೆ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಹೆಸರಿನಲ್ಲಿ ಸರಿಸುಮಾರು 49.83 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಹಿಂದೂ ಅವಿಭಜಿತ ಕುಟುಂಬದ ಆಸ್ತಿಯೂ ಸೇರಿದರೆ ಈ ಪ್ರಮಾಣ 50.64 ಕೋಟಿ ರೂ. ತಲುಪುತ್ತದೆ. ಅಲ್ಲದೆ ದಂಪತಿ 23.08 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಹೋಲಿಕೆ ಮಾಡಿದರೆ ಅವರ ಪತ್ನಿ ಪಾರ್ವತಿ ಶ್ರೀಮಂತರಾಗಿದ್ದಾರೆ. ಸಿದ್ದರಾಮಯ್ಯ ಅವರ ಒಟ್ಟು ಚರಾಸ್ಥಿ 9.58 ಕೋಟಿ ರೂ. ಆಗಿದೆ. ಇದರಲ್ಲಿ ಅವರು ತಮ್ಮ ಪತ್ನಿಗೆ ನೀಡಿರುವ 6.16 ಕೋಟಿ ರೂ. ಸಾಲ ಹಾಗೂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯಗೆ ನೀಡಿರುವ 1.83 ಕೋಟಿ ರೂ. ಸಾಲವೂ ಸೇರಿದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ ಅವರು 21.86 ಲಕ್ಷ ರೂ. ಠೇವಣಿ ಹೊಂದಿದ್ದಾರೆ.
ಇನ್ನು ಅವರ ಪತ್ನಿ ಪಾರ್ವತಿ ಅವರು 11.26 ಕೋಟಿ ರೂ. ಮೌಲ್ಯದ ಚರಾಸ್ಥಿಯನ್ನು ಹೊಂದಿದ್ದಾರೆ. ಇದರಲ್ಲಿ ಸದಾಶಿವ ನಗರದ ಎಚ್ಡಿಎಫ್ಸಿ ಬ್ಯಾಂಕ್ನಲ್ಲಿರುವ 4.70 ಕೋಟಿ ರೂ. ನಿಶ್ಚಿ ಠೇವಣಿ, ಕುಮಾರ ಪಾರ್ಕ್ ಐಸಿಐಸಿಐ ಬ್ಯಾಂಕ್ನಲ್ಲಿರುವ ತಲಾ 1.04 ಕೋಟಿ ರೂ. ಮೊತ್ತದ ಎರಡು ನಿಶ್ಚಿತ ಠೇವಣಿಗಳೂ ಸೇರಿವೆ.
ಒಟ್ಟಾರೆ 6.92 ಕೋಟಿ ರೂ. ವಿವಿಧ ಬ್ಯಾಂಕ್ಗಳಲ್ಲಿವೆ. ಪಿಎಆರ್ವೈ ಪ್ರಾಜೆಕ್ಟ್ಸ್ನಲ್ಲಿ 1.79 ಕೋಟಿ ರೂ. ಸೇರಿ ಒಟ್ಟು 2.42 ಕೋಟಿ ರೂ. ಹೂಡಿಕೆ, 1.22 ಕೋಟಿ ರೂ. ಸಾಲವನ್ನೂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಬಳಿ 9.43 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದ್ದರೆ, ಅವರ ಪತ್ನಿಯ ಹೆಸರಿನಲ್ಲಿ ದುಪ್ಪಟ್ಟು ಅಂದರೆ 19.56 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿ ಇದೆ.
ಬೆಂಗಳೂರಿನಲ್ಲಿದೆ ಮನೆ ಹಾಗೂ ಕಮರ್ಷಿಯಲ್ ಕಾಂಪ್ಲೆಕ್ಸ್
ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಜಂಟಿ ಮಾಲಿಕತ್ವದಲ್ಲಿ ಬೆಂಗಳೂರಿನ ವಿಜಯನಗರ ಎಂಸಿ ಲೇಔಟ್ನಲ್ಲಿ ಮನೆ ಇದೆ. 9,000 ಚದರ ಅಡಿಯ ನಿವಾಸವನ್ನು 2004ರಲ್ಲಿ 32.88 ಲಕ್ಷ ರೂ.ಗೆ ಖರೀದಿ ಮಾಡಿದ್ದರು. ಇದರ ಈಗಿನ ಮೌಲ್ಯ 4.21 ಕೋಟಿ ರೂ. ಆಗಿದೆ. ಇನ್ನು ಮಲ್ಲೇಶ್ವರಂನಲ್ಲಿ ಪಾರ್ವತಿ ಅವರು ಫ್ಲಾಟ್ ಅನ್ನೂ ಹೊಂದಿದ್ದು, ಇದನ್ನು 2006ರಲ್ಲಿ ಖರೀದಿ ಮಾಡಲಾಗಿದೆ. ಇದರ ಈಗಿನ ಮೌಲ್ಯ 1.67 ಕೋಟಿ ರೂ. ಆಗಿದೆ.
ಹಿಂದೂ ಅವಿಭಜಿತ ಕುಟುಂಬದ ಹೆಸರಿನಲ್ಲಿ ಸಿದ್ದರಾಮನ ಹುಂಡಿಯಲ್ಲಿಯೂ ಮನೆ ಇದೆ. ಇದರ ಮೌಲ್ಯ 32 ಲಕ್ಷ ರೂ. ಆಗಿದೆ. ಸಿದ್ದರಾಮಯ್ಯ ಹೆಸರಿನಲ್ಲಿ ಬಸವೇಶ್ವರ ನಗರದ ವೆಸ್ಟ್ ಕಾರ್ಡ್ ರೋಡ್ನಲ್ಲಿ 10,000 ಚದರ ಅಡಿಯ ವಾಣಿಜ್ಯ ಕಟ್ಟಡವೂ ಇದೆ. 2004ರಲ್ಲಿ 39.59 ಲಕ್ಷ ರೂ.ಗೆ ಇದನ್ನು ಖರೀದಿ ಮಾಡಲಾಗಿತ್ತು. ಇದರ ಈಗಿನ ಮೌಲ್ಯ 7.33 ಕೋಟಿ ರೂ. ಆಗಿದೆ.
ಮುಡಾ ಸೈಟ್ ಮಾರುಕಟ್ಟೆ ಮೌಲ್ಯ 8.33 ಕೋಟಿ ರೂ.!
ಸಿದ್ದರಾಮಯ್ಯ ಅವರ ಪತ್ನಿ ಮೈಸೂರಿನ ವಿಜಯ ನಗರದಲ್ಲಿ 14 ಮುಡಾ ಸೈಟ್ ಹೊಂದಿದ್ದಾರೆ. ಮುಡಾದಿಂದ ಸ್ವಾಧೀನಕ್ಕೊಳಗಾದ ತಮ್ಮ ಜಮೀನಿಗೆ ಪರಿಹಾರವಾಗಿ ಇದನ್ನು ಪಡೆದುಕೊಂಡಿದ್ದಾರೆ. ಸೈಟ್ ನಂಬರ್ – 5, 25, 331, 332, 213, 214, 215, 216, 10855, 11189 ಹಾಗೂ 5085, 12065, 12068 ಹಾಗೂ 5108 ಸೇರಿ ಒಟ್ಟು 14 ಸೈಟ್ ಹೊಂದಿದ್ದಾರೆ. ಒಟ್ಟು 37,190.90 ಚದರ ಅಡಿಯ ಈ ಸೈಟ್ಗಳ ಮಾರುಕಟ್ಟೆ ಮೌಲ್ಯ 8.33 ಕೋಟಿ ರೂ. ಎಂದು ಅಫಿಡವಿಟ್ನಲ್ಲಿ ನಮೂದಿಸಿದ್ದಾರೆ.
ಮೈಸೂರಿನ ವರುಣಾ, ಜಯಪುರದಲ್ಲೂ ಜಮೀನು
ಇದಷ್ಟೇ ಅಲ್ಲ ಸಿದ್ದರಾಮಯ್ಯ ಅವರ ಪತ್ನಿ ಮೈಸೂರಿನ ವರುಣಾದಲ್ಲಿ 1 ಎಕರೆ 8 ಗುಂಟೆ ಜಮೀನು ಹೊಂದಿದ್ದಾರೆ. ಇದರ ಮೌಲ್ಯ 19.40 ಲಕ್ಷ ರೂ. ಆಗಿದೆ. ಇದು ಸಿದ್ದರಾಮಯ್ಯ ಅವರಿಂದ ಬಳುವಳಿಯಾಗಿ ಬಂದಿರುವ ಜಮೀನು ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನು ಮೈಸೂರಿನ ಜಯಪುರ ಹೋಬಳಿಯಲ್ಲೂ 7 ಎಕರೆ 17 ಗುಂಟೆ ಜಮೀನು ಹೊಂದಿದ್ದಾರೆ. ಇದರ ಮೌಲ್ಯ 1.10 ಕೋಟಿ ರೂ. ಆಗಿದೆ. ಇದು ದಿವಂಗತ ಪುತ್ರ ರಾಕೇಶ್ರಿಂದ ಸಿಕ್ಕ ಆಸ್ತಿಯಾಗಿದೆ. ಹೀಗೆ 2 ಕೃಷಿ ಜಮೀನು, 14 ಮುಡಾ ಸೈಟು, ಒಂದು ವಾಣಿಜ್ಯ ಸಂಕೀರ್ಣ, 2 ಮನೆ (ಬೆಂಗಳೂರಿನಲ್ಲೊಂದು, ಸಿದ್ದರಾಮನ ಹುಂಡಿಯಲ್ಲೊಂದು), 1 ಫ್ಲ್ಯಾಟ್ ಸೇರಿ ಒಟ್ಟು 20 ಸ್ಥಿರಾಸ್ತಿಗಳನ್ನು ಸಿದ್ದರಾಮಯ್ಯ ದಂಪತಿ ಹೊಂದಿದ್ದಾರೆ.
ಸಾಲ ಎಷ್ಟಿದೆ?
ಸಿದ್ದರಾಮಯ್ಯ ನವರ ಸಾಲ 23.7 ಕೋಟಿ ರೂ. ಇದೆ. ಈ ಪೈಕಿ ಸ್ವತಃ ಸಿದ್ದರಾಮಯ್ಯ ಅವರ ಮೇಲೆ 6.84 ಕೋಟಿ ರೂ. ಸಾಲ, ಪತ್ನಿ ಪಾರ್ವತಿ ಅವರ ಮೇಲೆ 16.24 ಕೋಟಿ ರೂ. ಸಾಲ, ಕುಟುಂಬದ ಮೇಲೆ 67 ಲಕ್ಷ ರೂ. ಸಾಲವಿದೆ ಎಂದು ಚುನಾವಣಾಧಿಕಾರಿಗಳಿಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ನಗದು ಎಷ್ಟಿದೆ?
ಸಿದ್ದರಾಮಯ್ಯ ಅವರ ಬಳಿ ಇರುವ ನಗದು 1.5 ಲಕ್ಷ ರೂ. ಪತ್ನಿ ಹೆಸರಿನಲ್ಲಿ 1.28 ರೂ., ಕುಟುಂಬದ ಕಡೆ 1.5 ಲಕ್ಷ ರೂ. ಇದೆ. ಸಿದ್ದರಾಮಯ್ಯ ಅವರ ಬಳಿ ಬ್ಯಾಂಕ್ನಲ್ಲಿರುವ ಡಿಪಾಸಿಟ್ 21.8 ಲಕ್ಷ ರೂ. ಪತ್ನಿ ಬಳಿ ಇರುವ ಡಿಪಾಸಿಟ್ 6.8 ರೂ. ಕುಟುಂಬದ ಡಿಪಾಸಿಟ್ ಹಣ 17,335 ರೂ. ಆಗಿದೆ. ಪತ್ನಿ ಹೆಸರಿನಲ್ಲಿ 2.42 ಕೋಟಿ ರೂ. ಬಾಂಡ್ ಇದೆ.
ಯಾರಿಗೆ ಎಷ್ಟು ಸಾಲ ನೀಡಿದ್ದಾರೆ?
ಸಿದ್ದರಾಮಯ್ಯ ಅವರು ಪತ್ನಿ ಪಾರ್ವತಿ ಅವರಿಗೆ 6 ಕೋಟಿ ರೂ. ಸಾಲ, ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ 1.83 ಕೋಟಿ ರೂ. ಸಾಲ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಬಳಿ 28 ಲಕ್ಷ ರೂ. ಮೌಲ್ಯದ ಟೊಯೊಟಾ ಕಾರು ಇದೆ. ಶಾಸಕ ಕೆಜೆ ಜಾರ್ಜ್ಯಿಂದ 4 ಕೋಟಿ ರೂ. ಸಾಲ ಪಡೆದಿದ್ದಾರೆ.