ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ “ಕಾಲಾಪತ್ಥರ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 13 ರಂದು ಬಿಡುಗಡೆಯಾಗಲಿದೆ. ಹಿರಿಯ ಪತ್ರಕರ್ತ ಕೆ.ಎಸ್.ವಾಸು ‘ಕಾಲಾಪತ್ಥರ್’ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದರು. ಆನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
Bengaluru Breaking: ಟಿಪ್ಪರ್ ಲಾರಿ ಡಿಕ್ಕಿ ಹೊಡೆದು 35 ಕಂಬಗಳು ಧರೆಗೆ: ಸ್ಥಳೀಯ ಶಾಸಕರಿಂದ ಪರಿಶೀಲನೆ!
ಮೊದಲು ಮಾತನಾಡಿದ ನಿರ್ಮಾಪಕರಾದ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲನಕೋಟೆ, ಆರಂಭದಿಂದಲೂ ತಾವು ನಮ್ಮ ಚಿತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ನಾವು ಆಭಾರಿ. ಈಗ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇನ್ನು ಮುಂದೆ ನಿಮ್ಮ ಪ್ರೋತ್ಸಾಹ ಹೆಚ್ಚು ಬೇಕು ಎಂದರು.
ನನ್ನದು ಈ ಚಿತ್ರದಲ್ಲಿ ಶಿಕ್ಷಕಿಯ ಪಾತ್ರ. ಗಂಗ ನನ್ನ ಪಾತ್ರದ ಹೆಸರು. ನನ್ನ ಪಾತ್ರ ಹಾಗೂ ಚಿತ್ರ ಎರಡು ಚೆನ್ನಾಗಿದೆ. ನನಗೆ ಈಗಷ್ಟೇ ವಿಕ್ಕಿ ಅವರು ಚಿತ್ರದ ತುಣುಕು ತೋರಿಸಿದ್ದರು. ಅದನ್ನು ನೋಡಿದ ಮೇಲೆ ನಾನಂತೂ ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದರು ನಾಯಕಿ ಧನ್ಯ ರಾಮಕುಮಾರ್.
ನಾನು ಕನ್ನಡ ಚಿತ್ರರಂಗಕ್ಕೆ ಬಂದು ಹದಿನೈದು ವರ್ಷಗಳಾಯಿತು. ಸೆಪ್ಟೆಂಬರ್ ಗೆ ಸೂರಿ ಅವರ ನಿರ್ದೇಶನದಲ್ಲಿ ನಾನು ನಾಯಕನಾಗಿ ನಟಿಸಿದ್ದ “ಕೆಂಡಸಂಪಿಗೆ” ಚಿತ್ರ ತೆರೆಕಂಡು ಒಂಭತ್ತು ವರ್ಷಗಳಾಗುತ್ತಿದೆ. ನಾನು ನಿರ್ದೇಶಿಸಿ, ನಾಯಕನಾಗೂ ನಟಿಸಿರುವ “ಕಾಲಾಪತ್ಥರ್” ಚಿತ್ರ ಕೂಡ ಸೆಪ್ಟೆಂಬರ್ ನಲ್ಲೇ ಬಿಡುಗಡೆಯಾಗುತ್ತಿರುವುದು ಖುಷಿಯಾಗಿದೆ. “ಕಾಲಾಪತ್ಥರ್”, ಕಪ್ಪುಕಲ್ಲಿಗೆ ಸಂಬಂಧಿಸಿದ ಕಥೆ. ಸತ್ಯಪ್ರಕಾಶ್ ಅವರು ಕಥೆ ಬರೆದಿದ್ದಾರೆ. ವಿಜಾಪುರದ ಬಳಿ ಹೆಚ್ಚು ಚಿತ್ರೀಕರಣವಾಗಿದೆ. ಆಲಮಟ್ಟಿಯ ಹಿನ್ನೀರಿನ ಜೈನಾಪುರ ಎಂಬ ಸ್ಥಳದಲ್ಲಿ ಚಿತ್ರೀಕರಣ ನಡೆದಿದ್ದು, ನಮ್ಮ ಚಿತ್ರದ ಚಿತ್ರೀಕರಣವಾಗಿ ಕೆಲವೇ ತಿಂಗಳಲ್ಲೇ ಈ ಹಳ್ಳಿ ನೀರಿನಲ್ಲಿ ಮುಳುಗಡೆಯಾಗಿದೆ. ನಮ್ಮ ಚಿತ್ರವನ್ನು “ಮಾರ್ಟಿನ್” ಚಿತ್ರದ ನಿರ್ಮಾಪಕರಾದ ಉದಯ್ ಕೆ ಮೆಹ್ತಾ ಅವರು ವಿತರಣೆ ಮಾಡುತ್ತಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ದೇಶಕ ಹಾಗೂ ನಾಯಕ ವಿಕ್ಕಿ ವರುಣ್. ಛಾಯಾಗ್ರಾಹಕ ಸಂದೀಪ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.