ತಾಂತ್ರಿಕ ದೋಷದ ಕಾರಣದಿಂದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದಿನಗಳ ಕಳೆದ ಹಾಗೆ ಅವರ ಜೀವಕ್ಕೆ ಅಪಾಯವಾಗುವಂಥ ಸನ್ನಿವೇಶಗಳು ನಿರ್ಮಾಣವಾಗಬಹುದು ಎನ್ನುವ ಅಂದಾಜಿನ ಸಮಸ್ಯೆಗಳು ಎದುರಾಗುತ್ತಿವೆ. ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯೊಂದಿಗೆ ಅವರು ಭೂಮಿಗೆ ವಾಪಾಸಾಗುವ ಹಂತದಲ್ಲಿ ಮೂರು ನಿರ್ಣಾಯಕ ಅಪಾಯಗಳನ್ನು ಅವರು ಎದುರಿಸಲಿದ್ದಾರೆ. ಹಾಗೇನಾದರೂ ಅವರು ಮರುಪ್ರವೇಶ ವಿಫಲವಾದಲ್ಲಿ, ಕೇವಲ 96 ಗಂಟೆಗಳ ಆಮ್ಲಜನಕದೊಂದಿಗೆ ಬಾಹ್ಯಾಕಾಶದಲ್ಲಿ ಸಿಲುಕಿಕೊಳ್ಳಬಹುದು ಎನ್ನಲಾಗಿದೆ.
ನೌಕೆ ಸ್ಟೀಪ್ ಆಂಗಲ್ಅಲ್ಲಿ ಭೂಮಿಗೆ ಮರಳಿದಲ್ಲಿ, ಅವರ ಹೀಟ್ ಶೀಲ್ಡ್ ವಿಫಲವಾಗಿ ಸಾವು ಕಾಣುವ ಅಪಾಯವೂ ಇರುತ್ತದೆ ಎನ್ನಲಾಗಿದೆ. ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ರೀಎಂಟ್ರಿ ಮಾಡ್ಯುಲ್ನಲ್ಲಿ ಗಂಭೀರ ಸಮಸ್ಯೆ ಎದುರಾಗಿರುವ ಕಾರಣ ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಐಎಸ್ಎಸ್ನಲ್ಲಿಯೇ ಉಳಿದುಕೊಂಡಿದ್ದಾರೆ. ಜೂನ್ 5 ರಂದು ಬಾಹ್ಯಾಕಾಶಕ್ಕೆ ಹೋಗಿದ್ದ ಅವರು, ಒಂದು ವಾರದಲ್ಲಿ ಭೂಮಿಗೆ ವಾಪಾಸಗಬೇಕಿತ್ತು. ಅದೀಗ ಎಂಟು ತಿಂಗಳವರೆಗೆ ವಿಸ್ತರಣೆಯಾಗಿದೆ. ಇದರಿಂದಾಗಿ ಅವರು ಭೂಮಿಗೆ ಮರಳಲು ಸ್ಪೇಸ್ ಎಕ್ಸ್ನ ಕ್ರೂ ಡ್ರ್ಯಾಗನ್ಅನ್ನೇ ನಂಬಿಕೊಳ್ಳಬೇಕಾಗಿದೆ.
ಬೋಯಿಂಗ್ ಸ್ಟಾರ್ಲೈನರ್ನಲ್ಲಿಯೇ ಗಗನಯಾತ್ರಿಗಳನ್ನು ಭೂಮಿಗೆ ಕರೆಸಿಕೊಳ್ಳಬೇಕೇ ಅಥವಾ ಸ್ಪೇಸ್ ಎಕ್ಸ್ ಯೋಜನೆಯ ಮೂಲಕ ಅವರನ್ನು ಭೂಮಿಗೆ ಮರಳಿ ಕರೆತರಬೇಕೇ ಎನ್ನುವ ನಿಟ್ಟಿನಲ್ಲಿ ನಾಸಾ ಗೊಂದಲದಲ್ಲಿದೆ. ಬೋಯಿಂಗ್ ಸ್ಟಾರ್ಲೈನರ್ನ ಗಗನಯಾತ್ರಿಗಳು ಧರಿಸಿರುವ ಸ್ಪೇಸ್ ಸೂಟ್ನೊಂದಿಗೆ ಸ್ಪೇಸ್ ಎಕ್ಸ್ನಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲ.
ಯುಎಸ್ ಮಿಲಿಟರಿ ಬಾಹ್ಯಾಕಾಶ ವ್ಯವಸ್ಥೆಗಳ ಮಾಜಿ ಕಮಾಂಡರ್ ರೂಡಿ ರಿಡಾಲ್ಫಿ, ಸ್ಟಾರ್ಲೈನರ್ ಅನ್ನು ಮರುಪ್ರವೇಶಕ್ಕೆ ಬಳಸುವುದರಿಂದ ಉಂಟಾಗುವ ಮೂರು ಗಂಭೀರ ಸನ್ನಿವೇಶಗಳನ್ನು ಹೈಲೈಟ್ ಮಾಡಿದ್ದಾರೆ. ಸುರಕ್ಷಿತ ಮರುಪ್ರವೇಶಕ್ಕಾಗಿ ಬಾಹ್ಯಾಕಾಶ ನೌಕೆಯ ಸೇವಾ ಮಾಡ್ಯೂಲ್ನ ಜೋಡಣೆಯು ನಿರ್ಣಾಯಕವಾಗಿದೆ. ಭೂಮಿಗೆ ಸುರಕ್ಷಿತವಾಗಿ ಇಳಿಯುವುದನ್ನು ಖಚಿತಪಡಿಸಿಕೊಳ್ಳಲು ಸ್ಟಾರ್ಲೈನರ್ ಅನ್ನು ಸರಿಯಾಗಿ ಇರಿಸಬೇಕು ಎಂದು ರಿಡಾಲ್ಫಿ ವಿವರಿಸಿದರು. ಜೋಡಣೆಯು ತಪ್ಪಾಗಿದ್ದರೆ, ಹಲವಾರು ಅಪಾಯಕಾರಿ ಫಲಿತಾಂಶಗಳು ಸಂಭವಿಸಬಹುದು ಎಂದಿದ್ದಾರೆ.