ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಇಂದು ತಡರಾತ್ರಿ ನಡೆಯುವ ಲಾಸನ್ ಡೈಮಂಡ್ ಲೀಗ್ ನಲ್ಲಿ ಸ್ಪರ್ಧಿಸಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024ರ ಕಂಚಿನ ವಿಜೇತೆ ಆಂಡರ್ಸನ್ ಪೀಟರ್ಸ್ (ಗ್ರೆನಡಾ), ಜಾಕುಬ್ ವಡ್ಲೆಜ್ (ಜೆಕ್ ರಿಪಬ್ಲಿಕ್) ಮತ್ತು ಜೂಲಿಯಸ್ ಯೆಗೊ (ಕೀನ್ಯಾ) ಅವರಿಂದ ನೀರಜ್ಗೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿಲ್ಲ.
2022ರಲ್ಲಿ ಡೈಮಂಡ್ ಲೀಗ್ ಚಾಂಪಿಯನ್ ಆಗಿದ್ದ ಚೋಪ್ರಾ ಕಳೆದ ವರ್ಷದ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. 2023ರಲ್ಲಿ ಎವ್ಜಿನಿಯಲ್ಲಿ ನಡೆದಿದ್ದ ಫೈನಲ್ನಲ್ಲಿ ಚೋಪ್ರಾ ಎರಡನೇ ಸ್ಥಾನ ಪಡೆದಿದ್ದರು. ಝೆಕ್ ರಿಪಬ್ಲಿಕ್ನ ಜೇಕಬ್ ವಡ್ಲೆಚ್ ಮೊದಲ ಸ್ಥಾನ ಪಡೆದಿದ್ದರು. ಸದ್ಯ ಡೈಮಂಡ್ ಲೀಗ್ ಅಂಕಪಟ್ಟಿಯಲ್ಲಿ 7 ಅಂಕದೊಂದಿಗೆ 4ನೇ ಸ್ಥಾನದಲ್ಲಿರುವ ಚೋಪ್ರಾ ಅವರು ಫೈನಲ್ನಲ್ಲಿ ಸ್ಥಾನ ಗಿಟ್ಟಿಸಲು ಸರಣಿಯಲ್ಲಿ ಅಗ್ರ-6ರೊಳಗೆ ಸ್ಥಾನ ಪಡೆಯಬೇಕಾಗಿದೆ.
ಗಾಯದ ಮಧ್ಯೆಯೂ 26ರ ಹರೆಯದ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ನಲ್ಲಿ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಇದು ನೀರಜ್ ಅವರ ವರ್ಷದ ಎರಡನೇ ಡೈಮಂಡ್ ಲೀಗ್ ಪ್ರದರ್ಶನವಾಗಿದೆ. ಮೇ ತಿಂಗಳಲ್ಲಿ ನಡೆದ ದೋಹಾ ಡೈಮಂಡ್ ಲೀಗ್ನಲ್ಲಿ ಅವರು ಎರಡನೇ ಸ್ಥಾನ ಗಳಿಸಿದ್ದರು.