ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಸಿಗುವ ಆನಂದವೇ ಬೇರೆ. ಅಲ್ಲದೇ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಮೈ-ಕೈ ನೋವಿದ್ದರೆ ನಿವಾರಣೆ ಆಗುತ್ತದೆ. ಅಲ್ಲದೇ ಬಿಸಿ ನೀರಿನ ಸ್ನಾನ ದೇಹ ಮತ್ತು ಮನಸ್ಸನ್ನು ತುಂಬಾ ಉಲ್ಲಾಸಕರವಾಗಿರಿಸುತ್ತದೆ.ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದ್ದರೂ, ಪುರುಷರ ಆರೋಗ್ಯಕ್ಕೆ ಸುರಕ್ಷಿತವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಪುರುಷ ವೀರ್ಯಾಣು ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುತ್ತದೆ.
ವೀರ್ಯಾಣುಗಳು ಉತ್ಪತ್ತಿಯಾಗುವುದು ಎಲ್ಲಿ ಹೇಳಿ? ಪುರುಷರ ವೃಷಣಗಳಲ್ಲಿ. ವೃಷಣಗಳು ಪುರುಷರ ದೇಹದ ಒಳಭಾಗದಲ್ಲಿ ಇರುವು ದಿಲ್ಲ, ಬದಲಿಗೆ ದೇಹದ ಹೊರಗೆ ಇರುತ್ತವೆ. ಚರ್ಮದ ಹೊದಿಕೆಯಲ್ಲಿ ಸೇರಿರುತ್ತವೆ. ನಮ್ಮ ಇಡೀ ದೇಹದ ತಾಪಮಾನಕ್ಕೆ ಹೋಲಿಸಿದರೆ ಈ ಭಾಗದಲ್ಲಿ ನಾಲ್ಕು ಡಿಗ್ರಿ ಕಡಿಮೆ ಇರುತ್ತದೆ ಎಂದು ಸಂಶೋಧ ನೆಯ ಮೂಲಗಳು ಹೇಳುತ್ತವೆ. ಇಷ್ಟು ಕಡಿಮೆ ತಾಪಮಾನ ಇದ್ದರೆ ಮಾತ್ರ, ವೃಷಣಗಳಲ್ಲಿ ವೀರ್ಯಾಣುಗಳು ಸಮರ್ಪ ಕವಾಗಿ ಉತ್ಪತ್ತಿಯಾಗಲು ಸಾಧ್ಯವಾಗುತ್ತದೆ.
ಹಾರ್ವರ್ಡ್ ಹೆಲ್ತ್ ಪಬ್ಲಿಶಿಂಗ್ ಸಂಸ್ಥೆ ಹೇಳುವ ಪ್ರಕಾರ ವೃಷಣಗಳು ಇದೇ ತಾಪಮಾನದಲ್ಲಿ ಜರ್ಮ್ ಸೆಲ್ ಗಳನ್ನು ಉತ್ಪತ್ತಿ ಮಾಡಿ ತಮ್ಮ ಕಾರ್ಯ ಚಟುವಟಿಕೆಯನ್ನು ಸರಾಗವಾಗಿ ಮುಂದುವರಿಸುತ್ತಿರುತ್ತವೆ.ಆದರೆ ಯಾವುದೇ ಸಂದರ್ಭದಲ್ಲಿ ವೃಷಣಗಳ ಭಾಗಕ್ಕೆ ಯಾವುದೇ ಮೂಲದಿಂದ ಬಿಸಿ ತಾಗಿದರೆ (ಅಂದರೆ ಅದು ಬಿಸಿ ನೀರಿನ ಸ್ನಾನ ಕೂಡ ಆಗಿರಬಹುದು) ಆ ಸಂದರ್ಭದಲ್ಲಿ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಇದು ಪುರುಷರ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟಿರೋನ್ ಮೇಲೂ ಸಹ ಪ್ರಭಾವ ಬೀರುತ್ತದೆ.
ಹೀಗಾಗಿ ವೃಷಣಗಳ ಭಾಗಕ್ಕೆ ತಾಪಮಾನ ಹೆಚ್ಚಾಗುವುದು ಸರಿಯಲ್ಲ. ಇದರಿಂದ ಸಹಜವಾಗಿ ಪುರುಷರ ಫಲವತ್ತತೆಗೆ ಸಮಸ್ಯೆ ಎದುರಾಗುತ್ತದೆ.ಅಷ್ಟೇ ಅಲ್ಲದೆ ವೃಷಣಗಳ ಭಾಗದಲ್ಲಿ ತಾಪಮಾನ ಹೆಚ್ಚಾಗು ವುದು ಇರುವಂತಹ ಡಿಎನ್ಎ ಮೇಲೂ ಕೂಡ ಪ್ರಭಾವ ಬೀರಿ ವೀರ್ಯಾಣು ಗಳ ಗಾತ್ರ ಮತ್ತು ಆಕಾರ ಬದಲಾಗಬಹುದು. ಇದು ಹುಟ್ಟುವ ಮಕ್ಕಳ ಗಾತ್ರ ಮತ್ತು ಆಕಾರವನ್ನು ಸಹ ಬದಲಿಸುತ್ತದೆ.
ಅಂದರೆ ಹುಟ್ಟುವ ಮಕ್ಕಳಲ್ಲಿ ನ್ಯೂನ್ಯತೆಯನ್ನು ಸೃಷ್ಟಿ ಮಾಡುತ್ತದೆ. ಕೆಲವೊಂದು ಮೂಲಗಳು ಹೇಳುವ ಪ್ರಕಾರ ಪ್ರತಿದಿನ ಯಾವ ಪುರುಷರು ದಿನಕ್ಕೆ ಎರಡು ಬಾರಿ ಬಿಸಿನೀರಿನ ಸ್ನಾನ ಮಾಡುತ್ತಾರೆ ಅವರಿಗೆ ಸೋಂಕುಗಳ ಪ್ರಮಾಣ ಕೂಡ ಸ್ವಲ್ಪ ಹೆಚ್ಚಾಗಿರುತ್ತದೆ ಎಂದು ತಿಳಿದು ಬಂದಿದೆ. ಪುರುಷರು ಫಲವತ್ತತೆ ಸಮಸ್ಯೆ ಕಾಣದೆ ಇರಲು ಈ ಟಿಪ್ಸ್ ಅನುಸರಿಸ ಬೇಕು.
ಮೇಲೆ ಹೇಳಿದ ಹಾಗೆ ಯಾವಾಗಲೂ ಬಿಸಿ ನೀರಿನ ಸ್ನಾನ ಮಾಡುವುದು, ದಿನದಲ್ಲಿ ಹೆಚ್ಚು ಬಾರಿ ಬಿಸಿ ನೀರು ಸ್ನಾನ, ಸೌದೆ ಒಲೆಯ ಮುಂದೆ ಕೂರುವುದು. ಇವೆಲ್ಲವೂ ಸಹ ದೇಹದ ತಾಪಮಾನವನ್ನು ಹೆಚ್ಚು ಮಾಡುತ್ತವೆ. ಹಾಗಾಗಿ ಅದರಿಂದ ವೃಷಣಗಳ ತಾಪಮಾನ ಕೂಡ ಹೆಚ್ಚಾಗುತ್ತದೆ. ಜೊತೆಗೆ ಬಿಗಿಯಾದ ಬಟ್ಟೆ ಧರಿಸುವುದ ರಿಂದ ಕೂಡ ವೃಷಣಗಳ ತಾಪಮಾನ ಏರಿಕೆ ಆಗುತ್ತದೆ. ಹೀಗಾಗಿ ತೆಳ್ಳಗಿನ ಕಾಟನ್ ಬಟ್ಟೆ ಹಾಕಿಕೊಳ್ಳುವುದು ಉತ್ತಮ.
ಒಟ್ಟಾರೆ ಆರೋಗ್ಯ ಮತ್ತು ಉತ್ತಮ ಪುರುಷ ಫಲವತ್ತತೆಗೆ ವಿಶ್ರಾಂತಿ, ಆಳವಾದ ನಿದ್ರೆ ಅತ್ಯಗತ್ಯ. ಇದು ಮಹಿಳೆಯರಿಗೂ ಅನ್ವಯಿಸುತ್ತದೆ. ದಿನಕ್ಕೆ ಕನಿಷ್ಠ 8 ಗಂಟೆಗಳ ನಿದ್ರೆ ಮಾಡಿ. ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ನಿಮ್ಮ ಹೆಂಡತಿಯೊಂದಿಗೆ ಮುಕ್ತ ಸಂಭಾಷಣೆ ನಡೆಸುವುದು ಮುಖ್ಯ. ಅಲ್ಲದೇ, ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು.
ಧೂಮಪಾನ ಮತ್ತು ಮದ್ಯಪಾನದಂತಹ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಬೇಕು. ಅವು ಜೀವಕೋಶಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ. ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ವೀರ್ಯದ ದಕ್ಷತೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ನಿಮ್ಮ ಒಟ್ಟಾರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.