ಹಾಸನ:- ಯಮರಾಯ ಯಾರ ರೂಪದಲ್ಲಿ ಬರ್ತಾನೋ ಗೊತ್ತಿಲ್ಲ. ಯಾವಾಗ ಏನ್ ಆಗತ್ತೋ ಒಂದು ಗೊತ್ತಾಗಲ್ಲ. 5 ನಿಮಿಷ ಮುಂಚೆ ಇದ್ದವರೂ ಕ್ಷಣಮಾತ್ರದಲ್ಲಿ ಮಾಯವಾಗಿ ಬಿಡುತ್ತಾರೆ.
ಹೌದು, ಕೆರೆಯಲ್ಲಿ ಮುಳುಗಿ ಓರ್ವ ಅಪ್ರಾಪ್ತ ಸೇರಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಜರುಗಿದೆ. ತಾಲ್ಲೂಕಿನ ಬಳ್ಳೂರು ಗ್ರಾಮದ ದೊಡ್ಡಕೆರೆಯಲ್ಲಿ ಘಟನೆ ಜರುಗಿದೆ.
15 ವರ್ಷದ ಶ್ರೀಕಾಂತ್, ಹಾಗೂ 18 ವರ್ಷದ ವಿಜಯ್ ಮೃತ ದುರ್ದೈವಿಗಳು ಎನ್ನಲಾಗಿದೆ. ಕೆರೆಗೆ ಮೀನು ಹಿಡಿಯಲು ತೆರಳಿದ್ದ ವೇಳೆ ದಿಢೀರ್ ಮಳೆ ಬಂದಿದೆ.
ತಕ್ಷಣ ರಕ್ಷಣೆ ಪಡೆಯಲು ಕೆರೆಯ ಪಕ್ಕದಲ್ಲಿದ್ದ ಮರದ ಕೆಳಗೆ ಇಬ್ಬರು ನಿಂತಿದ್ದರು. ಈ ಸಂದರ್ಭದಲ್ಲಿ ವಿಜಯ್ ಎಂಬಾತನ ಒಂದು ಕಾಲಿನ ಚಪ್ಪಲಿ ಕೆರೆಗೆ ಬಿದ್ದಿದ್ದು, ಶ್ರೀಕಾಂತ್ ಚಪ್ಪಲಿ ತೆಗೆದುಕೊಳ್ಳಲು ನೀರಿಗೆ ಇಳಿದಿದ್ದಾನೆ. ಕೆರೆಯಲ್ಲಿ ಹೂಳು, ಗಿಡ, ಗಂಟೆಗಳು ಬೆಳೆದಿದ್ದರಿಂದ ಕೆರೆಯ ನೀರಲ್ಲಿ ಶ್ರೀಕಾಂತ್ ಸಿಲುಕಿ ಒದ್ದಾಡಿದ್ದಾನೆ.
ಕೂಡಲೇ ಶ್ರೀಕಾಂತ್ ರಕ್ಷಣೆಗೆ ವಿಜಯ್ ತೆರಳಿದ್ದು, ಈಜು ಬಾರದಿದ್ದರಿಂದ ಕೆರೆಯಲ್ಲಿ ಮುಳುಗಿ ಇಬ್ಬರು ಅಸುನೀಗಿದ್ದಾರೆ.