ಬೆಂಗಳೂರು : ಸರ್ಕಾರ ಹಾಗೂ ಶಿಕ್ಷಣ ಇಲಾಖೆ ವಿರುದ್ದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಸಮರ ಸಾರಿದ್ದಾರೆ. ಶಾಲೆಗಳಲ್ಲಿ ಪಾಠ ನಿಲ್ಲಿಸಿ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರು ತಮ್ಮ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದು ಬೃಹತ್ ಪ್ರತಿಭಟನೆ ಮಾಡಿದರು. ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಅವರೆಲ್ಲಾ ಎಷ್ಟೇ ತೊಂದರೆ ಇದ್ದರೂ ಪ್ರತಿನಿತ್ಯ ಶಾಲೆಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರು… ಆದರೆ ಸರ್ಕಾರದ ಕೆಲವೊಂದಿಷ್ಟು ನಡೆಗಳು ಅವರನ್ನ ಕೆರಳುವಂತೆ ಮಾಡಿದ್ದು.., ಇವತ್ತು ಶಾಲೆಗಳಲ್ಲಿ ಪಾಠ ನಿಲ್ಲಿಸಿ ಸುಮಾರು 5000 ಕ್ಕೂ ಹೆಚ್ಚು ಶಿಕ್ಷಕರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು.
ಹೌದು… ಕಳೆದ ಹಲವು ವರ್ಷಗಳಿಂದ ತಮ್ಮ ಬೇಡಿಕೆ ಈಡೇರಿಸಿ ಎಂದು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮುಂದೆ ಬೇಡಿಕೆ ಇಡುತ್ತಾ ಬಂದ ಶಿಕ್ಷಕರ ತಾಳ್ಮೆಯ ಕಟ್ಟೆ ಇವತ್ತು ಒಡೆದಿತ್ತು… ಸಮಾಜ ತಳ ವರ್ಗದ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರನ್ನ ಸರ್ಕಾರ ಅಸಡ್ಡೆ ಮಾಡಿದೆ ಎಂದು ಇಂದು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರತಿಭಟನೆ ಮಾಡಿದರು. ಇನ್ನೂ.. ರಾಜ್ಯದಲ್ಲಿ ಸರಿಸುಮಾರು 45 ಸಾವಿರ ಸರ್ಕಾರಿ ಶಾಲೆಗಳಿದ್ದು.., ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. ಆದರೆ.. ಇವರ್ಯಾರಿಗೂ ಮುಂಬಡ್ತಿ ನೀಡದೇ ಹಿಂಬಡ್ತಿ ನೀಡಿದೆ. ಜೊತೆಗೆ ಅನೇಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರೇ ಇಲ್ಲದೇ ಶಾಲೆಗಳನ್ನ ನಡೆಸಲಾಗುತ್ತಿದ್ದು.., ಆದಷ್ಟು ಬೇಗಾ ಮುಖ್ಯ ಶಿಕ್ಷಕರನ್ನ ನೇಮಿಸಬೇಕು ಜೊತೆಗೆ ನಮ್ಮೆಲ್ಲಾ ಬೇಡಿಕೆಗಳನ್ನ ಈಡೇರಿಸಬೇಕೆಂದು ಇಂದು ಸುಮಾರು ಐದು ಸಾವಿರಕ್ಕೂ ಹೆಚ್ಚು ಶಿಕ್ಷಕರು ಪ್ರತಿಭಟನೆ ಮಾಡಿದರು…
ಹಾಗಾದರೆ ಶಿಕ್ಷಕರ ಒತ್ತಾಯವೇನು ಎನ್ನುವುದನ್ನ ನೋಡೋದಾದರೆ
* 2017 ರವರೆಗೆ ನೇಮಕವಾದ ಶಿಕ್ಷಕರನ್ನು 1 ರಿಂದ 7ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಬೇಕು
* ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ “ಪದವೀಧರ ಶಿಕ್ಷಕರೆಂದು” ಪದನಾಮೀಕರಿಸುವುದು
* 1 ರಿಂದ 8ನೇ ತರಗತಿಗೆ ನೇಮಕ ಹೊಂದಿದವರನ್ನು PST ಎಂದು ಪದನಾಮ ಮಾಡಿ 1-5 ನೇ ತರಗತಿಗೆ ಸೀಮಿತಗೊಳಿಸಿರುವುದನ್ನು ಹಿಂಪಡೆಯಬೇಕು
* ಅರ್ಹ ವಿದ್ಯಾರ್ಹತೆ ಪೂರೈಸಿದ 2016ಕ್ಕಿಂತ ಮೊದಲು ನೇಮಕಾತಿಯಾದ ಎಲ್ಲಾ 1 ರಿಂದ 8ನೇ ತರಗತಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಮುಗಿಯುವವರೆಗೂ ಈ ಮೊದಲಿನಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು.
* ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು*
ಇನ್ನೂ… ಶಿಕ್ಷಣ ಇಲಾಖೆ ಯಾವುದೇ ರೀತಿ ತರಗತಿಗಳನ್ನ ನಿಲ್ಲಿಸಿದಂತೆ ಆದೇಶ ಹೊರಡಿಸಿತ್ತು.. ಆದರೆ ಶಿಕ್ಷಣ ಇಲಾಖೆಯ ಆದೇಶಕ್ಕೆ ಕ್ಯಾರೇ ಅನ್ನದ ಶಿಕ್ಷಕರೆಲ್ಲಾರೂ ಇಂದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಾಗೂ ಶಿಕ್ಷಣ ಇಲಾಖೆಗೆ ಬಿಸಿ ಮುಟ್ಟಿಸಿದ್ದು.., ಒಂದು ವೇಳೆ ಸರ್ಕಾರ ಇಂದಿನ ಪ್ರತಿಭಟನೆಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಶಿಕ್ಷಕರು ನೇರವಾಗಿ ಎಚ್ಚರಿಕೆ ನೀಡಿದರು.
ಒಟ್ನಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಕೈಗಳು ಇಂದು ಬಳಪ, ಕಪ್ಪು ಬೋರ್ಡ್ ಬಿಟ್ಟು ನ್ಯಾಯ ನೀಡಿ ಎಂದು ಬೋರ್ಡ್ ಹಿಡಿದು ತಮ್ಮ ಬೇಡಿಕೆಗಳನ್ನ ಈಡೇರಿಸಿ ಎಂದು ಸರ್ಕಾರಕ್ಕೆ ಮನವಿಮಾಡಿಡರು.. ಆದರೆ ಇವರ ಮನವಿಗೆ ಸರ್ಕಾರ ಎಷ್ಟರ ಮಟ್ಟಿಗೆ ಓ ಗುಟ್ಟುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.