ಹುಬ್ಬಳ್ಳಿ, : ಹುಬ್ಬಳ್ಳಿಯ ಬಹು ನಿರೀಕ್ಷಿತ ಯೋಜನೆಯಲ್ಲಿ ಒಂದಾಗಿರುವ ಪ್ಲೈಓವರ್ ಕಾಮಗಾರಿ ಆಮೆ ವೇಗ ಪಡೆದಿದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಳಂಬ ಮಾಡಿದ ಪ್ಲೈಓವರ್ ಕಾಮಗಾರಿಗೆ ಸಿದ್ಧಪ್ಪ ಕಂಬಳಿ ರಸ್ತೆಯಲ್ಲಿರುವ ಅನೇಕ ಜಾಗಗಳನ್ನ ಭೂಸ್ವಾಧೀನ ಮಾಡಿಕೊಳ್ಳದಂತೆ ಹೈಕೋರ್ಟ್ ಧಾರವಾಡ ಪೀಠ ಆದೇಶ ಹೊರಡಿಸಿದ್ದು, ತಡೆಯಾಜ್ಞೆ ನೀಡಿದೆ.
ಪ್ಲೈಓವರ್ ಕಾಮಗಾರಿಗಾಗಿ ಭೂಸ್ವಾಧೀನ ಪ್ರಕ್ರಿಯೆ ಕುರಿತು 2023ರ ಮಾರ್ಚ್ 9ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ, ಆಸ್ತಿಗಳನ್ನು ಗುರುತು ಮಾಡಲಾಗಿತ್ತು. ಈ ಕುರಿತು ಆಕ್ಷೇಪಣೆ ಸಲ್ಲಿಕೆಯಾದ ನಂತರ, ಅಂತಿಮ ಅಧಿಸೂಚನೆ ಹೊರಡಿಸಬೇಕಿತ್ತು. ಈಗ ಯಾವುದೇ ಆಸ್ತಿಯನ್ನು ಭೂಸ್ವಾಧೀನ ಪಡಿಸಿಕೊಳ್ಳದಂತೆ ಆದೇಶಿಸಿದೆ. ಪ್ರಾಥಮಿಕ ಅಧಿಸೂಚನೆ ಮತ್ತು ಯೋಜನೆಯಲ್ಲಿನ ಹಲವು ನ್ಯೂನತೆಗಳನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಇದನ್ನ ಪರಿಶೀಲಿಸಿ ಈಗ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬರೊಬ್ಬರಿ 320 ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಸಂಪೂರ್ಣವಾಗಿ ವೈಜ್ಞಾನಿಕವಾಗಿ ಕೂಡಿದೆ. ಇದೇ ಕಾರಣಕ್ಕಾಗಿ ನ್ಯಾಯಾಲಯವು 2023ರ ಅಧಿಸೂಚನೆಗೆ ಜೂನ್ 12ರಂದು ತಡೆಯಾಜ್ಞೆ ನೀಡಿತ್ತು. ಆ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಜೂನ್ 14ಕ್ಕೆ ಮತ್ತೊಂದು ಅಧಿಸೂಚನೆ ಹೊರಡಿಸಿದ್ದರು.
ಅದನ್ನು ಪ್ರಶ್ನಿಸಿ ಮತ್ತೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಅದಕ್ಕೆ ಜುಲೈ 22ರಂದು ತಡೆಯಾಜ್ಞೆ ನೀಡಿದೆ. ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ ಯೋಜನೆ ಜಾರಿಯಾಗುವುದಕ್ಕೂ ಮುನ್ನ ಸಾಮಾಜಿಕ ಪರಿಣಾಮಗಳ ಕುರಿತು ಸಮೀಕ್ಷೆ ನಡೆಸಿಲ್ಲ. ಅಲ್ಲದೆ, ಕಾಯ್ದೆಯ ಹಲವು ಅಂಶಗಳನ್ನು ಪಾಲಿಸಿಲ್ಲ. 3ಡಿ ಅಧಿಸೂಚನೆ ಹೊರಡಿಸಿ, ಭೂಸ್ವಾಧೀನ ಪಡಿಸಿಕೊಂಡ ಜಾಗಕ್ಕೆ ಪರಿಹಾರ ನೀಡಿದ ನಂತರ ಕಾಮಗಾರಿ ಆರಂಭಿಸಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ಕಾಮಗಾರಿ ಆರಂಭಿಸಲಾಗಿತ್ತು. ಈ ರೀತಿಯ ಹಲವು ಯಡವಟ್ಟನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಡಿದ್ದರು. ಹೀಗಾಗಿ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಅಧಿಕಾರಿಗಳಿಗೆ ಮುಖಭಂಗ ಆದದಂತಾಗಿದೆ.
ಫ್ಲೈಓವರ್ ಕಾಮಗಾರಿಗೆ ಯಾವುದೇ ಮುಂದಾಲೋಚನೆ ಇಲ್ಲ. ಹೀಗಾಗಿ ಜಾಗವನ್ನು ಭೂಸ್ವಾಧೀನ ಮಾಡಿಕೊಳ್ಳದಂತೆ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಅದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಹೋರಾಟಗಾರಿಗೆ ಜಯ ಸಿಕ್ಕಂತಾಗಿದೆ. ಇನ್ನೊಂದು ಕಡೆ ಫ್ಲೈಓವರ್ಗೆ ಭೂಸ್ವಾಧೀನ ಮಾಡಿಕೊಂಡರೆ ಮಾರುಕಟ್ಟೆ ಪ್ರದೇಶ ಪ್ರವೇಶಿಸಲು ಜಾಗ ಇಲ್ಲದಂತಾಗುತ್ತದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವ ಹೆಜ್ಜೆ ಇಡುತ್ತಾರೆಂಬುದನ್ನ ಕಾದು ನೋಡಬೇಕಿದೆ.