ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವ ಪ್ರಯುಕ್ತ ವಾಣಿಜ್ಯ ನಗರಿಯಲ್ಲಿ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಬೃಹತ್ ತಿರಂಗಾ ಬೈಕ್ ರ್ಯಾಲಿ ನಡೆಸಲಾಯಿತು.
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಈ ತಿರಂಗಾ ಬೈಕ್ ರ್ಯಾಲಿ ನಗರದ ದುರ್ಗದ ಬೈಲಿನಿಂದ ಚೆನ್ನಮ್ಮ ಸರ್ಕಲ್ ವರೆಗೆ ಸಂಚರಿಸಿ ಗಮನ ಸೆಳೆಯಿತು.
ಈ ವೇಳೆ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಸ್ವಾತಂತ್ರ್ಯೋತ್ಸವವನ್ನು ಹರ್ ಘರ್ ತಿರಂಗಾ ಅಭಿಯಾನದ ಮೂಲಕ ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರಂತೆ ಈ ವರ್ಷ ನಮ್ಮ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಅಭಿಯಾನದಲ್ಲಿ ಎಲ್ಲರರನ್ನೂ ತೊಡಗಿಸಿ ಯಶಸ್ವಿಗೊಳಿಸಲೆಂದು ಈ ತಿರಂಗಾ ಬೈಕ್ ರ್ಯಾಲಿ ನಡೆಸಲಾಗುತ್ತಿದೆ ಎಂದು ಹೇಳಿದರು.
ರ್ಯಾಲಿಯಲ್ಲಿ ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ವಿಧಾನಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಪ್ರಮುಖರಾದ ಡಾ.ಕ್ರಾಂತಿ ಕಿರಣ್ ಹಾಗೂ ಪಾಲಿಕೆ ಸದಸ್ಯರು, ಹು-ಧಾ ಜಿಲ್ಲಾ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.