ಬೆಂಗಳೂರು:- ಏರ್ಪೋರ್ಟ್ ನಲ್ಲಿ ಬ್ಯಾಗ್ ಚೆಕಿಂಗ್ ವೇಳೆ ಬಾಂಬ್ ಇದೆ ಎಂದು ತಮಾಷೆ ಮಾಡಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೇರಳದ ಕೊಚ್ಚಿನ್ ಏರ್ಪೋರ್ಟ್ನಲ್ಲಿ ಈ ಪ್ರಸಂಗ ನಡೆದಿದೆ. ಸೆಕ್ಯುರಿಟಿ ಚೆಕ್ಇನ್ ಅಧಿಕಾರಿಗಳು ತಮ್ಮ ಬ್ಯಾಗ್ ತಪಾಸಣೆ ಮಾಡುತ್ತಿದ್ದ ವೇಳೆ, ತನ್ನ ಬ್ಯಾಗ್ನಲ್ಲಿ ಏನೂ ಬಾಂಬ್ ಇಲ್ವಲ್ಲಾ, ಎಂದು ಹೇಳುವ ಮೂಲಕ ತಾನೇ ಅನಾಹುತ ಸೃಷ್ಟಿಸಿಕೊಂಡಿದ್ದಾನೆ.
42 ವರ್ಷದ ಮನೋಜ್ ಕುಮಾರ್ ಕೊಚ್ಚಿಯಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಅವರ ಹೇಳಿಕೆ ಕಳವಳಕ್ಕೆ ಕಾರಣವಾಯಿತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್) ಅವರ ಕ್ಯಾಬಿನ್ ಮತ್ತು ಸಾಮಾನುಗಳನ್ನು ಸಂಪೂರ್ಣವಾಗಿ ಶೋಧಿಸಿತು. ಅನುಮಾನಾಸ್ಪದವಾಗಿ ಏನೂ ಪತ್ತೆಯಾಗದಿದ್ದರೂ, ಕುಮಾರ್ ಅವರನ್ನು ವಿಮಾನದಿಂದ ಇಳಿಸಿ ಕರೆದೊಯ್ದು ವಿಚಾರಣೆಗಾಗಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಮಾನ ಹೊರಟರೂ ಅವರಿಗೆ ಪ್ರಯಾಣ ಮಾಡಲು ಅವಕಾಶ ಕೊಡಲಿಲ್ಲ.
ಹೆಚ್ಚು ಭದ್ರತೆಗೆ ಒಳಪಡುವ ಪ್ರದೇಶದಲ್ಲಿ ಬಾಂಬ್ ನಂತಹ ಅಪಾಯಕಾರಿ ವಿಷಯದ ಬಗ್ಗೆ ಮಾತನಾಡಬಾರದು ಎಂಬುದಕ್ಕೆ ಇದೊಂದು ಉದಾಹರಣೆ. ಇಂಥ ಮಾತುಗಳನ್ನು ಹೇಳುವುದು ಕಾನೂನುಬಾಹಿರ ಮತ್ತು ಗಂಭೀರ ಅಪರಾಧ. ಭಾರತದಲ್ಲಿ ವಿಮಾನ ಭದ್ರತಾ ಮಾನದಂಡಗಳನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಇಂಥವುಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ತಮಾಷೆಯೂ ಗಮನಾರ್ಹ ವಿಳಂಬಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಅಂಥವರನ್ನು ತಕ್ಷಣವೇ ಬಂಧಿಸುತ್ತಾರೆ.
ಪ್ರಯಾಣ ಮಾಡುವಾಗ ಜತೆಗಿರುವ ಮಗು ಆ ರೀತಿ ಹೇಳಿದರೂ, ಅದು ಇಡೀ ವಿಮಾನ ಹಾರಾಟವನ್ನು ವಿಳಂಬವನ್ನು ಉಂಟುಮಾಡಬಹುದು. ಪ್ರಮುಖವಾಗಿ ವಿಮಾನ ನಿಲ್ದಾಣಗಳಲ್ಲಿ “ಬಾಂಬ್” ಅಥವಾ “ಹೈಜಾಕ್” ನಂತಹ ಪದಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತದೆ