ಬಾಗಲಕೋಟೆ: ಬಿವಿವಿ ಸಂಘಕ್ಕೆ ಜಾಗವನ್ನು ನಿಯಮ ಬಾಹಿರವಾಗಿ ನೀಡಲಾಗಿದೆ ಎಂಬ ಮಾಹಿತಿಯನ್ನು ಒಬ್ಬ ಮಂತ್ರಿಯ ಕಛೇರಿಯಲ್ಲಿ ಕುಳಿತು ಚರ್ಚೆ ಮಾಡುವ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರಗೆ ಏನು ರೋಗ ಬಂದಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಸ್ವಪಕ್ಷದ ನಾಯಕರ ವಿರುದ್ಧವೇ ಹರಿಹಾಯ್ದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಬಿಟ್ಟು ಜೆಡಿಎಸ್, ಕಾಂಗ್ರೆಸ್ ಪಕ್ಷಕ್ಕೆ ಹೋಗಿ ನಂತರ ನಮ್ಮ ಪಕ್ಷಕ್ಕೆ ಬಂದು ಎಂಎಲ್ಸಿ ಆಗಿದ್ದಾರೆ ಆದರೆ ಇವರು ಕಾಂಗ್ರೆಸ್ನವರ ಜತೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇದೆಲ್ಲವನ್ನೂ ನಮ್ಮ ಪಕ್ಷದನಾಯಕರ ಗಮನಕ್ಕೆ ತರಲಾಗಿದೆ. ಇನ್ನೂ ದಾಖಲೆ ಸಮೇತ ಮಾಹಿತಿಯನ್ನು ನಾಯಕರಿಗೆ ಕೊಡುತ್ತೇವೆ ಎಂದರು.
ಬಿವಿವಿಸಂಘಕ್ಕೆ 59ನೇ ಸೆಕ್ಟರ್ದಲ್ಲಿ ಜಾಗ ನೀಡಿದ್ದು ಅಕ್ರಮ ಎಂದು ರದ್ದು ಆಗಿರುವ ಹಿಂದೆ ಪಿ.ಎಚ್.ಪೂಜಾರ ಷಡ್ಯಂತ್ರ ಅಡಗಿದೆ. ಸಂಘಕ್ಕೆ ಬೇಕಾಬಿಟ್ಟಿ ಜಾಗವನ್ನು ತೆಗೆದುಕೊಂಡಿದ್ದಾರೆ ಎಂದು ಮಂತ್ರಿಯೊಬ್ಬರಿಗೆ ಹೇಳುವ ಸಂದರ್ಭದಲ್ಲಿ ನಮಗೆ ಮಾಹಿತಿ ಬಂದಿದೆ. ನನ್ನ ಹೆಸರು ಎಲ್ಲಿಯೂ ಬರಬಾರದು ಪಾರ್ಟಿಯಲ್ಲಿ ತೊಂದರೆಯಾಗಲಿದೆ ಎಂದು ಮಂತ್ರಿಯೊಬ್ಬರಿಗೆ ತಿಳಿಸುವಾಗಲೇ ನಮಗೆ ಕರೆ ಮಾಡಿ ಅಲ್ಲಿಯ ಒಬ್ಬರು ತಿಳಿಸಿದ್ದಾರೆ. ಇಷ್ಟೊಂದು ಹೊಂದಾಣಿಕೆ ರಾಜಕಾರಣ ಮಾಡಬಾರದು ಎಂದು ಕಿಡಿಕಾರಿದರು. ಬಿಟಿಡಿಎಗೆ ಹಿಂದೆ ವಿಧಾನಪರಿಷತ್ ಸದಸ್ಯರು ಸಭೆಗೆ ಆಹ್ವಾನ ಇರಲಿಲ್ಲ. ಜಾಮದಾರ ಇದ್ದಾಗ ಹಾಗೂ ಎಸ್.ಆರ್.ಪಾಟೀಲರು ಎಂಎಲ್ಸಿ ಇದ್ದಾಗಲೂ ಬಿಟಿಡಿಎಗೆ ಅವರಿಗೆ ಅವಕಾಶ ಇರಲಿಲ್ಲ. ಅದು ಮುಂದುವರೆ ದಿತ್ತು ಈಗ ಪೂಜಾರ ಋಣ ತೀರಿಸಲು ಅವರನ್ನು ಬಿಟಿಡಿಎ ಸಭೆಗೆ ಆಹ್ವಾನ ಇದೆ ಎಂದು ತಿಳಿಸಿದ್ದಾರೆ. ಇಲ್ಲಸಲ್ಲದ ಮಾಹಿತಿ ಯನ್ನು ಸಂಘದ ವಿರುದ್ಧ ನೀಡಿದ್ದಾರೆ. ಈಗ ಅವರು ಬಿಟಿಡಿಎ ಫಲಾನುಭವಿ ಆಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಲೂಟಿ ಮಾಡಲು ಶಾಸಕರಾಗಿ ಬಂದೀರಾ
ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ನಾವು ಚಾಲನೆ ಕೊಟ್ಟ ಕಾಮಗಾರಿಗಳೇ ಮುಂದುವರೆದಿವೆ. ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇನ್ನೂ ಸ್ಥಳೀಯ ಶಾಸಕರ ಅಳಿಯ ಆರೋಗ್ಯ ಇಲಾಖೆಯ ಸಿಬ್ಬಂದಿ ನೇಮಕಾತಿ ಸಂದರ್ಭದಲ್ಲಿ ಕೋಟ್ಯಾಂತರ ರೂ. ಲೂಟಿಮಾಡಿದ್ದಾರೆ ಹೀಗಾಗಿ ಶಾಸಕರು ಅಭಿವೃದ್ಧಿ ಕೆಲಸಗಳನ್ನು ಮಾಡದೇ ಲೂಟಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು. ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ಬಿಜೆಪಿ ಸರ್ಕಾರ ಇದ್ದಾಗ ಹೋರಾಟ ಮಾಡುವವರು ಈಗ ಯಾಕೆ ಸುಮ್ಮನಿದ್ದಾರೆ ಎಂದು ಕಿಡಿಕಾರಿದರು. ಎಸ್ಪಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಆದರೆ ಅವರ ಕೆಳಮಟ್ಟದ ಅಧಿಕಾರಿಗಳು ಸರಿಯಾಗಿ ಕೆಲಸಮಾಡದೇ ಇರುವ ಪರಿಣಾಮ ಕಾನೂನು ಸುವ್ಯವಸ್ಥೆ ಹದಗೆಟ್ಟು, ಹಲ್ಲೆ, ಕೊಲೆ, ದರೋಡೆ ಕ್ಷೇತ್ರದಲ್ಲಿ ನಡೆಯುತ್ತಿವೆ ಎಂದು ದೂರಿದರು.